ಬೆಂಗಳೂರು, ಆ.21(Daijiworld News/SS): ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೂತನ ಸಚಿವರಿಗೆ ಸೂಚನೆ ನೀಡಿದ್ದಾರೆ.
ಸಭೆ ನಡೆಸಿ ನೂತನ ಸಚಿವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಮೊದಲ ಆದ್ಯತೆ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸುವುದು. ಎರಡು ದಿನ ಪ್ರವಾಹ ಪ್ರದೇಶಗಳಿಗೆ ಹೋಗಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸಬೇಕು. ಬಳಿಕ ಪ್ರವಾಹದಿಂದ ತೀವ್ರ ತೊಂದರೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತನಾಡಿ ಅದರ ವರದಿಯನ್ನು ಸಲ್ಲಿಸಬೇಕು ಎಂದು ನೂತನ ಸಚಿವರಿಗೆ ಸೂಚಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಜಿಲ್ಲಾ ಉಸ್ತುವಾರಿಯ ಹೊಣೆಗಾರಿಕೆ ಹಾಗೂ ಖಾತೆ ಹಂಚಿಕೆ ಬಗ್ಗೆ ನಿರ್ಧರಿಸುತ್ತೇನೆ. ಅಲ್ಲಿಯವರೆಗೂ ಪ್ರವಾಹದಿಂದ ಆಗಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿಕೊಳ್ಳಿ. ಮುಂದಿನ ಸಚಿವ ಸಂಪುಟ ಸಭೆಯೊಳಗೆ ಅನುಷ್ಠಾನ ಯೋಗ್ಯ ಕಾರ್ಯತಂತ್ರ ರೂಪಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಯೆಡೆಗೆ ಮುನ್ನಡೆಸಲು ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಬಿಜೆಪಿ ಸರ್ಕಾರ ರಚನೆಯಾದ ಎರಡು ಮೂರು ದಿನಗಳಲ್ಲಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನೆರೆಗೆ ಉತ್ತರ ಕರ್ನಾಟಕ ತತ್ತರಿಸಿದ್ದು, ಸಚಿವರಿಲ್ಲದ ಹಿನ್ನೆಲೆ ಸಿಎಂ ಯಡಿಯೂರಪ್ಪ ಒಬ್ಬರೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನೆರೆ ಪರಿಹಾರ ಕ್ರಮ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕಸಭೆ ನಡೆಸಿದ್ದರು. ಸಂಕಷ್ಟ ಪರಿಸ್ಥಿತಿಯಲ್ಲೂ ಸಂಪುಟ ರಚನೆ ಮಾಡದ ಬಿಎಸ್ವೈ ಅವರ ನಡೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.