ಚಿಕ್ಕಮಗಳೂರು, ಏ. 22 (DaijiworldNews/AA): ಮಲ್ಲಿಕಾರ್ಜುನ ಖರ್ಗೆಯವರೇ ನೀವು ಮಾನಸಿಕ ಅಸ್ವಸ್ಥರಂತೆ ಹೇಳಿಕೆ ಕೊಡ್ತಿದ್ದೀರಿ. ನಿಮ್ಮ ಹೇಳಿಕೆ 6 ದಶಕಗಳ ರಾಜಕೀಯ ಅನುಭವಕ್ಕೆ ತಕ್ಕದ್ದಾಗಿಲ್ಲ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮೋದಿ ಭಯೋತ್ಪಾದಕ ಎಂಬ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, "ಖರ್ಗೆ ಅವರೇ, ಮಾನಸಿಕ ಅಸ್ವಸ್ಥರ ರೀತಿ ಹೇಳಿಕೆ ಕೊಡ್ತಿದ್ದೀರಿ. ನೀವು ಮೆಂಟಲ್ ಆಸ್ಪತ್ರೆಯ ರೋಗಿಯಂತೆ ವರ್ತಿಸುತ್ತಿದ್ದೀರಿ ಎಂದು ಜನ ಭಾವಿಸಿದ್ದಾರೆ. ನಿಜವಾದ ಭಯೋತ್ಪಾದಕರನ್ನು ನಿಮ್ಮ ಪಕ್ಷದ ಮುಖಂಡರು ಬ್ರದರ್ಸ್ ಎಂದು ಕರೆಯುತ್ತಾರೆ" ಎಂದು ಕಿಡಿಕಾರಿದ್ದಾರೆ.
"ನಿಮ್ಮ ಪಕ್ಷ ಮೊಹಬತ್ ಕಾ ದುಖಾನ್ ಮಾತನಾಡ್ತಿತ್ತು. ನೀವು ಮಾರ್ಕೆಟಿಂಗ್ ಮಾಡ್ತಿರೋದು ನಫರತ್ ಕಾ ದುಖಾನ್. ಗುಜರಾತ್ ಜನ ಅನಕ್ಷರಸ್ಥರು, ಮೋದಿ ಭಯೋತ್ಪಾದಕ ಎಂದಿದ್ದೀರಿ. ಬಿಜೆಪಿ, ಆರ್.ಎಸ್.ಎಸ್ ವಿಷಜಂತು, ಅದನ್ನು ಕೊಲ್ಲಿ ಎಂದು ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದ್ದೀರಿ. ಭಯೋತ್ಪಾದನೆ ನಡೆದಾಗ ಭಯೋತ್ಪಾದಕರ ಬಗ್ಗೆ ಸಿಂಪಥಿ ಬರುವಂತೆ, ಸಣ್ಣ ವಿಚಾರದಂತೆ ಮಾತನಾಡ್ತಾರೆ. ಮಾನಸಿಕ ದೌರ್ಬಲ್ಯಗಳ ಸುಳಿಗೆ ನೀವು ಸಿಲುಕಿದ್ದೀರಿ. ನೀವು ನಿಮ್ಮ ಪಕ್ಷವನ್ನು ಎದುರಿಸಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೀರಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.