ನವದೆಹಲಿ, ಏ. 22 (DaijiworldNews/AA): ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗುತ್ತಿರುವ ನಿರ್ಬಂಧ ದೂರದ ಘಟನೆಯಲ್ಲ, ಅವು ಭಾರತ ದೇಶದ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ನೇರ ಪರಿಣಾಮ ಬೀರುವ ಕಠಿಣ ವಾಸ್ತವಗಳಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.

ತಮ್ಮ ಮೂರು ದಿನಗಳ ಭೇಟಿ ಅಂಗವಾಗಿ ಜರ್ಮನ್ ಸಂಸತ್ತಿನ ರಕ್ಷಣಾ ಮತ್ತು ಭದ್ರತಾ ಸ್ಥಾಯಿ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಗತ್ತು ಹೊಸ ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ. ತಾಂತ್ರಿಕ ಪರಿವರ್ತನೆಯಿಂದ ಪರಿಸ್ಥಿತಿ ಅತ್ಯಂತ ಸಂಕೀರ್ಣ ಮತ್ತು ಪರಸ್ಪರ ಸಂಪರ್ಕಿತವಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ತಾಂತ್ರಿಕ ದೃಷ್ಟಿಯಿಂದ ಮಹತ್ವದ ಜಲಸಂಧಿಯಲ್ಲಿ ತಡೆ ಉಂಟಾಗಿದೆ ಎಂದರು.
ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮನೋಭಾವದೊಂದಿಗೆ ಹೊಸ ದೃಷ್ಟಿಕೋನವು ಈ ಸಮಯದ ಅಗತ್ಯವಾಗಿದೆ. ಭಾರತ ಮತ್ತು ಜರ್ಮನಿಯ ರಕ್ಷಣಾ ಕೈಗಾರಿಕಾ ವ್ಯವಸ್ಥೆಗಳ ನಡುವೆ ಸಹಕಾರವನ್ನು ಹೆಚ್ಚಿಸುವಂತೆ ಮನವಿ ಮಾಡಿದರು.
"ಪಶ್ಚಿಮ ಏಷ್ಯಾ ಪ್ರದೇಶದಿಂದ ತನ್ನ ಇಂಧನ ಅಗತ್ಯಗಳ ಮಹತ್ತರ ಭಾಗವನ್ನು ಪೂರೈಸಿಕೊಳ್ಳುವ ಅಭಿವೃದ್ಧಿಶೀಲ ದೇಶವಾದ ಭಾರತಕ್ಕೆ, ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗುವ ವ್ಯತ್ಯಯಗಳು ದೂರದ ಘಟನೆಗಳಲ್ಲ; ಅವು ನಮ್ಮ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ನೇರ ಪರಿಣಾಮ ಬೀರುವ ವಾಸ್ತವಗಳಾಗಿವೆ. ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ಸಕ್ರಿಯ ಮತ್ತು ಸಂಯೋಜಿತ ಕಾರ್ಯತಂತ್ರವನ್ನು ಅನುಸರಿಸಿದೆ" ಎಂದು ತಿಳಿಸಿದರು.