ನವದೆಹಲಿ, ಏ. 22 (DaijiworldNews/AA): ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಮತದಾರರನ್ನು ಆಕರ್ಷಿಸಲು ಉದ್ದೇಶಿಸಲಾದ 1,072.12 ಕೋಟಿ ರೂ. ಮೌಲ್ಯದ ಮದ್ಯ, ಮಾದಕ ವಸ್ತು, ನಗದು ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಈ ವರ್ಷದ ಫೆಬ್ರವರಿ 29 ರಿಂದ ಇಲ್ಲಿಯವರೆಗೆ ಎರಡೂ ರಾಜ್ಯಗಳಲ್ಲಿ 1,072.12 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಹಣ, ಆಲ್ಕೋಹಾಲ್, ಡ್ರಗ್ಸ್, ಅಮೂಲ್ಯವಾದ ಲೋಹಗಳು ಮತ್ತು ಉಚಿತ ವಸ್ತುಗಳು ಸೇರಿದಂತೆ 472 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೇ, ತಮಿಳುನಾಡಿನಲ್ಲಿ 599 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ 5,000ಕ್ಕೂ ಹೆಚ್ಚು ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಮತ್ತು 5,000ಕ್ಕೂ ಹೆಚ್ಚು ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಆಯೋಗ ಹೇಳಿದೆ.
ತಮಿಳುನಾಡಿನಲ್ಲಿ ನಾಳೆ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ನಾಳೆ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಏಪ್ರಿಲ್ 29ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.