ಶ್ರೀನಗರ, ಆ.21(Daijiworld News/SS): ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬುಧವಾರ ಬೆಳಗ್ಗೆ ವಿಶೇಷ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದು, ಮತ್ತೊಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹುತಾತ್ಮ ಪೊಲೀಸ್ ಅಧಿಕಾರಿಯನ್ನು ಬಿಲ್ಲಾಲ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಬ್ ಇನ್ಸ್ ಪೆಕ್ಟರ್ ಅಮರ್ ದೀಪ್ ಪರಿಹಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡಿನ ದಾಳಿಯಲ್ಲಿ ಓರ್ವ ಉಗ್ರ ಹತನಾಗಿದ್ದು ಆತನ ಗುರುತು ಪತ್ತೆಯಾಗಿಲ್ಲ. ಸ್ಥಳದಿಂದ ಅಪಾರ ಪ್ರಮಾಣದ ಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಗಸ್ಟ್ 20ರ ಸಂಜೆ 5 ಗಂಟೆಯಿಂದ ಎನ್ ಕೌಂಟರ್ ಆರಂಭವಾಗಿತ್ತು. ಸೇನಾಪಡೆ ಯೋಧರ ಗಮನಕ್ಕೆ ಬರುತ್ತಿದ್ದಂತೆ ಇಡೀ ಪ್ರದೇಶವನ್ನು ಸುತ್ತುವರಿಯಲಾಯಿತು. ಅದು ರಾತ್ರಿಯಿಡೀ ಮುಂದುವರಿಯಿತು. ಇಂದು ಬೆಳಗ್ಗೆ 5.30ರ ವೇಳೆಗೆ ಎನ್ ಕೌಂಟರ್ ಕೊನೆಗೊಂಡಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸಾಂವಿಧಾನಿಕ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ನಡೆಯುತ್ತಿರುವ ಮೊದಲ ಎನ್ ಕೌಂಟರ್ ಇದಾಗಿದೆ. ಆಗಸ್ಟ್ 5ರಿಂದ ಕೆಲವು ಸಣ್ಣಪುಟ್ಟ ಕಲ್ಲು ತೂರಾಟ, ಪ್ರತಿಭಟನೆ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿದೆ.