ಮಧ್ಯಪ್ರದೇಶ, ಏ. 23 (DaijiworldNews/AA): ಯುಪಿಎಸ್ಸಿ ಪರೀಕ್ಷೆಯನ್ನು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ನಂತಹ ಉನ್ನತ ಸರ್ಕಾರಿ ಸೇವೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಡೆಸಲಾಗುತ್ತದೆ. 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ಪಡೆದ ಪಕ್ಷಲ್ ಸೆಕ್ರೆಟ್ರಿ ಅವರ ಯಶೋಗಾಥೆ ಇದು.

ಪಕ್ಷಲ್ ಸೆಕ್ರೆಟ್ರಿ ಅವರು ಮಧ್ಯಪ್ರದೇಶದ ಧಾರ್ ಜಿಲ್ಲೆಯವರು. ಅವರು 2017 ರಲ್ಲಿ ದಿ ಸಿಕಾ ಸೀನಿಯರ್ ಸೆಕೆಂಡರಿ ಶಾಲೆಯಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿದರು. ನಂತರ, ಅವರು 2019 ರಲ್ಲಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿದರು
ನಂತರ ಪಕ್ಷಲ್ ಅವರು ಉನ್ನತ ಅಧ್ಯಯನಕ್ಕಾಗಿ ಕಾನ್ಪುರದ ಐಐಟಿಯನ್ನು ಸೇರಿದರು. 2023 ರಲ್ಲಿ ಈ ಸಂಸ್ಥೆಯಿಂದ ಅರ್ಥಶಾಸ್ತ್ರದಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ ಅವರು ಐಚ್ಛಿಕ ವಿಷಯವಾಗಿ ಅರ್ಥಶಾಸ್ತ್ರವನ್ನು ಆಯ್ಕೆಮಾಡಿಕೊಂಡಿದ್ದರು.
ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಪಕ್ಷಲ್ ಅವರು ಸಂದರ್ಶನ ಹಂತದಲ್ಲಿ ಹಾಗೂ ಎರಡನೇ ಪ್ರಯತ್ನದಲ್ಲಿ ಪ್ರಿಲಿಮ್ಸ್ನಲ್ಲಿ ವಿಫಲರಾಗಿದ್ದರು. ಛಲಬಿಡದೆ 2025ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 8ನೇ ಅಖಿಲ ಭಾರತ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.