ಮಿರ್ಜಾಪುರ, ಏ. 23 (DaijiworldNews/TA): ಉತ್ತರ ಪ್ರದೇಶದ ಮಿರ್ಜಾಪುರ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಮಂದಿ ಸಜೀವ ದಹನಗೊಂಡು ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ನಡೆದ ಈ ದುರ್ಘಟನೆ ಪ್ರದೇಶದಲ್ಲಿ ಆಘಾತ ಮೂಡಿಸಿದೆ.

ಮಾಹಿತಿಯ ಪ್ರಕಾರ, ಇಳಿಜಾರಿನಲ್ಲಿ ಬರುತ್ತಿದ್ದ ಟ್ರಕ್ಗೆ ಬ್ರೇಕ್ ಫೇಲ್ ಆಗಿ ಅದು ವೇಗವಾಗಿ ಮತ್ತೊಂದು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಆ ಟ್ರಕ್ ಹಿಂದಿನಿಂದ ಬರುತ್ತಿದ್ದ ಕಾರು ಎರಡು ಭಾರೀ ವಾಹನಗಳ ನಡುವೆ ಸಿಲುಕಿಕೊಂಡು ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿಯ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತಿಕೊಂಡು, ಅದರೊಳಗಿದ್ದವರು ಪಾರಾಗಲು ಸಾಧ್ಯವಾಗದೇ ಸಜೀವ ದಹನಗೊಂಡಿದ್ದಾರೆ.
ಘಟನೆಯ ಬಳಿಕ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತಾದರೂ, ಬೆಂಕಿಯ ತೀವ್ರತೆಯಿಂದ ಯಾರನ್ನೂ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರ್ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದು, ಗಾಯಾಳುಗಳಿಗೆ ತಲಾ 50,000 ರೂಪಾಯಿ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರೆಸಿದ್ದಾರೆ.