ನವದೆಹಲಿ, ಏ. 23 (DaijiworldNews/AA): "ಬಂಗಾಳದಲ್ಲಿ ನಾನು ಝಲ್ಮುರಿ ಸವಿದ ವಿಷಯವು ಇಲ್ಲಿನ ಕೆಲವು ಜನರನ್ನು ನಡುಗಿಸಿತು ಎಂದು ನಾನು ಕೇಳಿದೆ. ತಮಾಷೆಯೆಂದರೆ ಝಲ್ಮುರಿ ತಿಂದಿದ್ದು ನಾನೇ ಆದರೂ ಅದರ ಖಾರ ಅನುಭವಿಸಿದ್ದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.

ಏಪ್ರಿಲ್ 29ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಮೇ 4ರಂದು ಫಲಿತಾಂಶಗಳು ಘೋಷಣೆಯಾದ ನಂತರ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ವಿಜಯವನ್ನು ಆಚರಿಸುತ್ತದೆ. ಆ ಸಮಯದಲ್ಲಿ ಸಿಹಿತಿಂಡಿಗಳು ಮತ್ತು ಝಲ್ಮುರಿ ಎರಡನ್ನೂ ವಿತರಿಸಲಾಗುತ್ತದೆ" ಎಂದು ಹೇಳಿದರು.
"ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ನಾನು ಎಲ್ಲಾ ಮತದಾರರನ್ನು ಅಭಿನಂದಿಸುತ್ತೇನೆ. ಎಲ್ಲರೂ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಬೇಕು. ಈ ಬಾರಿ ಇಲ್ಲಿಯವರೆಗೆ ಹಿಂಸಾಚಾರ ಕಡಿಮೆಯಾಗಿದೆ. ನಾನು ಭಾರತದ ಚುನಾವಣಾ ಆಯೋಗವನ್ನು ಅಭಿನಂದಿಸುತ್ತೇನೆ" ಎಂದರು.
"ಮತದಾನ ನಡೆಯುತ್ತಿರುವ ರೀತಿ ಮತ್ತು ಮತದಾರರು ಮತ ಚಲಾಯಿಸುತ್ತಿರುವ ಉತ್ಸಾಹವನ್ನು ನೋಡಿದರೆ ಈ ಬಾರಿ ಎಲ್ಲಾ ದಾಖಲೆಗಳು ಮುರಿಯುತ್ತವೆ ಎಂದು ತೋರುತ್ತದೆ. ಮತದಾನ ಪ್ರಕ್ರಿಯೆಯನ್ನು ಶಾಂತಿಯುತವಾಗಿಸಲು ರಾಜ್ಯ ಸರ್ಕಾರಿ ನೌಕರರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ" ಎಂದು ತಿಳಿಸಿದರು.