ಗುವಾಹಟಿ, ಏ. 24 (DaijiworldNews/AA): ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಂಬಂಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ತಿರಸ್ಕರಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಂಗಳವಾರ ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಮೂರ್ತಿ ಪಾರ್ಥಿವಜ್ಯೋತಿ ಸೈಕಿಯಾ ಅವರ ಏಕಸದಸ್ಯ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಶುಕ್ರವಾರ ಅಂತಿಮ ಆದೇಶ ಹೊರಡಿಸಿದ ನ್ಯಾಯಾಲಯವು, ಖೇರಾ ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ. ಈ ಹಿನ್ನೆಲೆ ಪವನ್ ಖೇರಾ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಅಸ್ಸಾಂ ಮುಖ್ಯಮಂತ್ರಿಯವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪವನ್ ಖೇರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು. ಸಾರ್ವಜನಿಕವಾಗಿ ತಮ್ಮ ವಿರುದ್ಧ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಘನತೆಗೆ ಧಕ್ಕೆ ತರಲಾಗಿದೆ ಎಂಬುದು ರಿನಿಕಿ ಅವರ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇರೆಗೆ ಅಸ್ಸಾಂ ಪೊಲೀಸರು ಪವನ್ ಖೇರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.