ಕೋಲ್ಕತ್ತಾ, ಏ. 24 (DaijiworldNews/AA): ಮೊದಲ ಹಂತದ ಚುನಾವಣೆ ನಡೆದ 152 ಸ್ಥಾನಗಳಲ್ಲಿ 110ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ನಡೆದ ಬಳಿಕ ಇಂದು ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಮೊದಲ ಹಂತದಲ್ಲಿ ದಾಖಲಾದ ಸುಮಾರು 92.7% ರಿಂದ 92.88% ರಷ್ಟು ದಾಖಲೆ ಮತದಾನವು ರಾಜ್ಯದಲ್ಲಿ ಪರಿವರ್ತನೆಯ ಸ್ಪಷ್ಟ ಸಂಕೇತ ಮತ್ತು ಬಿಜೆಪಿಗೆ ಪೂರಕವಾದ ಜನಾದೇಶವಾಗಿದೆ" ಎಂದು ಹೇಳಿದರು.
"ಈ ಬಾರಿ ಪ್ರಚಂಡ ಬಹುಮತದಿಂದ ಬಿಜೆಪಿ ಗೆಲ್ಲಲಿದೆ. 'ಭಯ' ನಿರ್ಗಮಿಸಲಿದೆ, 'ಭರವಸೆ' ಆಗಮಿಸಲಿದೆ. ಬಂಗಾಳ ಅಭಿವೃದ್ಧಿಯನ್ನು ಆಯ್ಕೆ ಮಾಡಿದೆ. ಮೊದಲ ಹಂತದ ಈ ಮುನ್ನಡೆಯ ಆಧಾರದ ಮೇಲೆ, ಎರಡನೇ ಹಂತದ ಮತದಾನ ಮುಗಿಯುವ ಹೊತ್ತಿಗೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು ಸಿದ್ಧವಾಗಲಿದೆ" ಎಂದರು.
"ಮೊದಲ ಹಂತದ ಮತದಾನದ ಮೂಲಕ ಜನರು 'ಭಯದಿಂದ ನಂಬಿಕೆಯತ್ತ' ಪ್ರಯಾಣ ಬೆಳೆಸಿದ್ದಾರೆ. ಇದೇ ಹಾದಿಯನ್ನು ಎರಡನೇ ಹಂತದ ಮತದಾರರು ಮುಂದುವರಿಸಲಿದ್ದಾರೆ. ಬಂಗಾಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ಪ್ರಾಣಾಪಾಯವಿಲ್ಲದೆ ಅತ್ಯಂತ ಶಾಂತಿಯುತವಾಗಿ ಚುನಾವಣೆ ನಡೆದಿದೆ ಎಂದು ಹೇಳುತ್ತಾ, ಇದಕ್ಕೆ ಸಹಕರಿಸಿದ ಚುನಾವಣಾ ಆಯೋಗ ಮತ್ತು ಭದ್ರತಾ ಪಡೆಗಳಿಗೆ" ಧನ್ಯವಾದ ತಿಳಿಸಿದರು.