ಚೆನ್ನೈ, ಆ 21 (Daijiworld News/MSP): ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಗೆ ತನ್ನ ಪುತ್ರಿಯ ಮದುವೆಯ ಸಿದ್ಧತೆಗಾಗಿ ಪೆರೋಲ್ ಅವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವಂತೆ ಕೋರಿ ಮಂಗಳವಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮನವಿಯನ್ನು ಪಡೆದ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎಂ ನಿರ್ಮಲ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಈ ವಿಚಾರವಾಗಿ ತನ್ನ ಪ್ರತ್ಯುತ್ತರವನ್ನು ಆಗಸ್ಟ್ 22ರೊಳಗೆ ನೀಡಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.
ಮತ್ತೆ 30 ದಿನಗಳ ಕಾಲ ಪೆರೋಲ್ ವಿಸ್ತರಣೆ ಮಾಡಲು ವೆಲ್ಲೂರು ಜೈಲು ಅಧಿಕಾರಿಗಳು ತಿರಸ್ಕರಿಸಿದ ಹಿನ್ನೆಲೆಯಲ್ಲಿ ನಳಿನಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಪುತ್ರಿಯ ವಿವಾಹಕ್ಕಾಗಿ ಸಿದ್ಧತೆ ಇನ್ನು ಬಹಳಷ್ಟು ಮಾಡಬೇಕಾಗಿದ್ದು ಈ ಕಾರಣಕ್ಕೆ ಪೆರೋಲ್ ವಿಸ್ತರಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮಗಳು ಲಂಡನ್ ನಲ್ಲಿದ್ದು, ವಿವಾಹದ ನಿಮಿತ್ತ ಮುಂದಿನ ತಿಂಗಳ ಮೊದಲ ವಾರದಲ್ಲಿ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ. ಮದುವೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲು ಇನ್ನೂ ಒಂದು ತಿಂಗಳ ಪೆರೋಲ್ ಅಗತ್ಯವಿದೆ ಎಂದು ನಳಿನಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.