ತಿರುವನಂತಪುರಂ, ಏ. 24 (DaijiworldNews/AA): ಕೇರಳದಲ್ಲಿ ಬಿಸಿಲ ಬೇಗೆ ತೀವ್ರವಾಗಿದ್ದು ಹಾವಿನ ಹಾವಳಿ ಹೆಚ್ಚಾಗಿದೆ. ತಂಪಾದ ಜಾಗ ಅರಸಿ ನಾಡಿಗೆ ಬರುತ್ತಿರುವ ಹಾವುಗಳ ಕಡಿತದಿಂದ ಮಗು ಸೇರಿ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಚಿರಯಿಂಕೀಳು ಅಜೂರಿನ ದೀಕ್ಷಾಲ್ ದಿಲೀಪ್ (8) ಮತ್ತು ಕಾಯಂಕುಲಂ ಚೆರವಳ್ಳಿಯ ಸೆಲಿನಾ (42) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ತೃಶೂರ್ನಲ್ಲಿ ಎಂಟು ವರ್ಷದ ಬಾಲಕನೋರ್ವ ಹಾವಿನ ಕಡಿತದಿಂದ ಮೃತಪಟ್ಟಿದ್ದನು.
ಮೃತ ದೀಕ್ಷಾಲ್ ಆರ್ಥಿಕವಾಗಿ ಹಿಂದುಳಿದ ಕುಟುಂಬವಾದ್ದರಿಂದ ತಗಡಿನ ಮೇಲ್ಛಾವಣಿ ಹಾಗೂ ಪ್ಲೈವುಡ್ ಗೋಡೆಗಳ ತಾತ್ಕಾಲಿಕ ಶೆಡ್ನಲ್ಲಿ ವಾಸವಾಗಿತ್ತು. ಇಂದು ಮುಂಜಾನೆ ಸುಮಾರು 2 ಗಂಟೆಗೆ ಅಜ್ಜಿಯ ಜೊತೆ ನೆಲದ ಮೇಲೆ ಮಲಗಿದ್ದಾಗ ನಾಗರಹಾವು ಆತನ ಬಲಗಾಲಿನ ಹೆಬ್ಬೆರಳಿಗೆ ಕಚ್ಚಿದೆ. ಬಾಲಕ ಕಿರುಚುತ್ತಾ ಎಚ್ಚರಗೊಂಡಿದ್ದು, ಕೂಡಲೇ ಪೋಷಕರು ಬೈಕ್ನಲ್ಲಿ ಚಿರಯಿಂಕೀಳು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಬಾಲಕನಿಗೆ ಹಾವು ಕಡಿದಿದೆ ಎಂದು ದೃಢಪಡಿಸಲು ವಿಫಲರಾಗಿದ್ದು, ವಿಷನಿರೋಧಕ ಲಸಿಕೆ ನೀಡಲಿಲ್ಲ ಎಂದು ಆರೋಪಿಸಲಾಗಿದೆ. ನಂತರ ಬಾಲಕನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಕರೆಯೊಯ್ಯುವ ದಾರಿ ಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ. ಇನ್ನು ತಾಲೂಕು ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಮಗ ಬದುಕುತ್ತಿದ್ದ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಕಾಯಂಕುಲಂನ ಸೆಲಿನಾ ಎಂಬುವವರು ಸಂಬಂಧಿಕರ ಮನೆಯ ಮದುವೆ ಸಮಾರಂಭ ಮುಗಿಸಿ, ತಮ್ಮ ಸ್ಕೂಟರ್ ತೆಗೆದುಕೊಳ್ಳಲು ಖಾಲಿ ಜಾಗವೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಂಜೆ 7:30ರ ಸುಮಾರಿಗೆ ಹಾವು ಕಚ್ಚಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಅವರನ್ನು ಕಾಯಂಕುಲಂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಇನ್ನು ತಿರುವನಂತಪುರಂನಲ್ಲಿ ಹಾವಿನ ಕಡಿತಕ್ಕೆ ಒಳಗಾದ ಇಬ್ಬರು ಸದ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇಸಿಗೆಯ ತೀವ್ರತೆಯಿಂದಾಗಿ ಹಾವುಗಳು ತಮ್ಮ ಬಿಲವನ್ನು ಬಿಟ್ಟು ತಂಪು ಪ್ರದೇಶಗಳಾದ ಮನೆ ಮತ್ತು ತೋಟಗಳತ್ತ ಮುಖಮಾಡುತ್ತಿದ್ದು, ಸಾರ್ವಜನಿಕರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.