ಬೆಂಗಳೂರು, ಏ. 25 (DaijiworldNews/TA): ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಣ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಈ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದು, ಜನರಿಗೆ ಕುಡಿಯುವ ನೀರಿನ ತೊಂದರೆ ಉಂಟಾದರೆ ಸಂಬಂಧಿತ ಜಿಲ್ಲಾಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕುಡಿಯುವ ನೀರಿನ ಪೂರೈಕೆಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ಈಗಾಗಲೇ 419.50 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಜಿಲ್ಲಾಧಿಕಾರಿಗಳಿಂದ ದೊರೆಯುವ ವರದಿಗಳ ಆಧಾರದ ಮೇಲೆ ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ಸೂಚಿಸಲಾಗಿದೆ. ಈ ಕಾರ್ಯದಲ್ಲಿ ಕಂದಾಯ, ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಿಎಂ ನಿರ್ದೇಶನ ನೀಡಿದ್ದಾರೆ.
ಪ್ರಸ್ತುತ ರಾಜ್ಯದ 114 ತಾಲೂಕುಗಳ 598 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಈಗಾಗಲೇ 137 ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ನೀರಿನ ಲಭ್ಯತೆಯನ್ನು ಹೆಚ್ಚಿಸಲು ಖಾಸಗಿ ಬೋರ್ವೆಲ್ಗಳು ಮತ್ತು ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ಸರ್ಕಾರ ತೀರ್ಮಾನಿಸಿದೆ.
ಇನ್ನೊಂದೆಡೆ, ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟು 321.93 ಟಿಎಂಸಿ ನೀರು ಲಭ್ಯವಿದ್ದು, ಸೋರಿಕೆಯನ್ನು ತಡೆದು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೀರಿನ ಸಮರ್ಪಕ ಬಳಕೆ ಮತ್ತು ಸಂರಕ್ಷಣೆಗೂ ಒತ್ತು ನೀಡಲಾಗಿದೆ. ಪ್ರತಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ತಕ್ಷಣವೇ ಟಾಸ್ಕ್ಫೋರ್ಸ್ ಸಭೆಗಳನ್ನು ನಡೆಸಿ, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಹಾಗೂ ಜಿ.ಪಂ. ಸಿಇಒಗಳು ಒಗ್ಗಟ್ಟಿನಿಂದ ಕೆಲಸ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಬೇಕು ಎಂದು ಹೇಳಿದ್ದಾರೆ.
ಅದೇ ವೇಳೆ, ಬಿಸಿಲಿನ ತಾಪದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಹಿನ್ನೆಲೆ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಬಿಸಿಲು ಮತ್ತು ನೀರಿನ ಅಭಾವದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದ್ದು, ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ.