ಬೆಂಗಳೂರು, ಏ. 25 (DaijiworldNews/AK): ಸಿದ್ದರಾಮಯ್ಯನವರೇ, ನೀವೇ ನೇಮಿಸಿದ ನ್ಯಾ.ನಾಗಮೋಹನ್ದಾಸ್ ಅವರ ವರದಿ ಅವೈಜ್ಞಾನಿಕ ಎಂಬ ಕಾರಣಕ್ಕೆ ತಿರಸ್ಕರಿಸಿದ್ದೀರಾ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವೇ ರಚಿಸಿದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವರದಿ ವೈಜ್ಞಾನಿಕ ಎಂದು ಒಪ್ಪಿಕೊಂಡಿದ್ದೀರಾ ಎಂದು ಸ್ಪಷ್ಟಪಡಿಸಲು ಒತ್ತಾಯಿಸಿದರು. ನಾಗಮೋಹನ್ದಾಸ್ ಅವರ ವರದಿಯಲ್ಲಿ ಶೇ 17 ಎಂದಿದ್ದರೂ ಶೇ 15ಕ್ಕೆ ಸೀಮಿತ ಮಾಡಿ ಕೊಡಬಹುದಾಗಿತ್ತು. ಯಾಕೆ ಕೊಟ್ಟಿಲ್ಲ ಎಂದು ಕೇಳಿದರು.
ನಿನ್ನೆ ದಿನ ಬೆಟ್ಟ ಅಗೆದು ಇಲಿ ಹುಡುಕಿದಂತೆ ಸಿದ್ದರಾಮಯ್ಯನವರು ಒಳ ಮೀಸಲಾತಿಯನ್ನು ಜಾರಿ ನಿರ್ಧಾರ ಪ್ರಕಟಿಸಿ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು ಎಂದು ನಿರಂತರ ಭಾಷಣ ಮಾಡಿದಿರಲ್ಲವೇ? ಇದು ಕೇವಲ ಭಾಷಣದ ಸರಕೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯನವರೇ, ಅಹಿಂದ ವರ್ಗದ ಕುರಿತು ನಿಮಗೇನಾದರೂ ಬದ್ಧತೆ ಇದೆಯೇ? ಬದ್ಧತೆ ಇದ್ದರೆ ನೀವು ಸಾವಿರಾರು ಕೋಟಿ ಖರ್ಚು ಮಾಡಿ ವರದಿ ತರಿಸಿದ್ದೀರಿ. ಕೆಂಪರಾಜ್ ವರದಿ ಮೂಲೆಗುಂಪು ಮಾಡಿದ್ದೀರಿ. ಅದಾದ ಬಳಿಕ ಜಯಪ್ರಕಾಶ್ ಹೆಗ್ಡೆ ಅವರ ವರದಿ ಮೂಲೆಗುಂಪಾಗಿದೆ. ಮಧುಸೂದನ ನಾಯಕ್ ವರದಿ ಹೊರಗೆ ಬರಲೇ ಇಲ್ಲ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯನವರು ಮಹಾ ಮೋಸಗಾರ
ಸಿದ್ದರಾಮಯ್ಯನವರೇ, ನಿಮಗೆ ಬದ್ಧತೆ ಎಲ್ಲಿದೆ? ಜನರಿಗೆ ಮೋಸ ಮಾಡಿ, ಬಡವರನ್ನು ದಾರಿ ತಪ್ಪಿಸಿ ಬಡವರಿಗೆ ಅಹಿಂದ ನಾಯಕ ಎಂದು ಹೇಳಿ ಅಧಿಕಾರಕ್ಕೆ ಬರುವುದೊಂದೇ ನಿಮ್ಮ ಗುರಿ. ಕುರ್ಚಿ ಉಳಿಸಿಕೊಳ್ಳಲು ನೀವು ಮಾಡುವುದನ್ನು ನೋಡಿದರೆ ಇದಕ್ಕಿಂತ ಹೆಚ್ಚಿನ ಮೋಸವನ್ನು ಪ್ರಪಂಚದಲ್ಲಿ ಬೇರೆ ಯಾರೂ ಮಾಡಲು ಸಾಧ್ಯ ಇಲ್ಲ ಅನಿಸುವುದಾಗಿ ತಿಳಿಸಿದರು. ಸಿದ್ದರಾಮಯ್ಯನವರು ಮಹಾ ಮೋಸಗಾರ ಎಂದು ಗೋವಿಂದ ಕಾರಜೋಳ ಅವರು ಟೀಕಿಸಿದರು.
ಸಿದ್ದರಾಮಯ್ಯನವರು ಈಚೆಗೆ ಕೇವಲ ಹೊಂದಾಣಿಕೆಯ ರಾಜಕಾರಣಿ ಆಗಿದ್ದಾರೆಂದು ಅವರ ಸಂಪುಟದ ಸಚಿವ ಸತೀಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಅದು ಅಸತ್ಯವೇ ಸತ್ಯವೇ ಎಂದು ಮುಖ್ಯಮಂತ್ರಿಗಳೇ ಹೇಳಲಿ ಎಂದು ಒತ್ತಾಯಿಸಿದರು. ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ಸಿದ್ದರಾಮಯ್ಯನವರಿಗೆ ಬದ್ಧತೆ ಇಲ್ಲ ಎನ್ನುತ್ತಿದ್ದಾರೆ ಎಂದರು.