ಮುಂಬೈ, ಏ. 25 (DaijiworldNews/AA): ಪಕ್ಷಾಂತರಿಗಳು ಗೂಂಡಾಗಳ ಮತ್ತು ಭ್ರಷ್ಟರ ಪಕ್ಷ ಸೇರಿದ್ದಾರೆ ಎಂದು ಆಪ್ ಸಂಸದ ರಾಘವ್ ಚಡ್ಡಾ ಬಿಜೆಪಿ ಸೇರಿದ್ದಕ್ಕೆ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವ ರೀತಿಯ ರಾಜಕೀಯ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ರಾಜಕೀಯವನ್ನು ಒಂದೇ ಪದದಲ್ಲಿ ಹೇಳಬೇಕೆಂದರೆ, ಅದು 'ನಾಚಿಕೆಗೇಡಿತನ'. ಬಿಜೆಪಿಯು 'ನಾಚಿಕೆಯಿಲ್ಲದ' ಪಕ್ಷ. ಮಹಾಭಾರತದಲ್ಲಿ ಬಕಾಸುರ ಎಂಬ ರಾಕ್ಷಸನಿದ್ದಾನೆ. ಅವನ ಹಸಿವು ಎಂದಿಗೂ ನೀಗುವುದಿಲ್ಲ, ಹೊಟ್ಟೆ ತುಂಬುವುದೇ ಇಲ್ಲ ಅದೇ ರೀತಿ ಬಿಜೆಪಿ ಕೂಡ ಬಕಾಸುನಿದ್ದಂತೆ ಎಂದು ಕಿಡಿಕಾರಿದ್ದಾರೆ.
"ಅವರಿಗೆ ಯಾವುದೇ ನಾಚಿಕೆ ಇಲ್ಲ. ನಿನ್ನೆಯವರೆಗೂ ನಮ್ಮ ಸ್ನೇಹಿತರಾಗಿದ್ದ ರಾಘವ್ ಚಡ್ಡಾ ಅವರಂತಹ ನಾಯಕರು, ಬಿಜೆಪಿ ಗೂಂಡಾಗಳ, ಪುಂಡರ ಮತ್ತು ಭ್ರಷ್ಟರ ಪಕ್ಷ ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಈಗ ಅವರೆಲ್ಲರೂ ಅದೇ ಗೂಂಡಾಗಳ ಮತ್ತು ಭ್ರಷ್ಟರ ಪಕ್ಷವನ್ನು ಸೇರಿಕೊಂಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬಿಜೆಪಿ ಈಗ ಬಕಾಸುರರ ಪಕ್ಷವಾಗಿ ಮಾರ್ಪಟ್ಟಿದೆ. ಅವರು ಸಿಕ್ಕಿದ್ದನ್ನೆಲ್ಲಾ ತಿಂದು ತೇಗುತ್ತಾರೆ. ರಾಘವ್ ಚಡ್ಡಾ ಅವರಂತಹ ಏಳು ಮಂದಿ ಆ ನರಕದಂತಹ ಪಕ್ಷಕ್ಕೆ ಸೇರಿದ್ದಾರೆ. ಅದರ ಬಗ್ಗೆ ನಮಗೆ ಯಾವುದೇ ವಿಷಾದವಿಲ್ಲ. ನರಕ ಹೇಗಿರುತ್ತದೆ ಎಂಬುದು ಅವರಿಗೆ ಶೀಘ್ರದಲ್ಲೇ ತಿಳಿಯಲಿದೆ. ಇದರಿಂದ ವಿರೋಧ ಪಕ್ಷ ಎಂದಿಗೂ ದುರ್ಬಲವಾಗುವುದಿಲ್ಲ. ಪಕ್ಷ ತೊರೆದ ಈ ಆರು-ಏಳು ಮಂದಿ ಜನಸಾಮಾನ್ಯರ ನಾಯಕರಲ್ಲ. ಅವರು ಹೆಚ್ಚೆಂದರೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಪೇಜ್ 3 ನಾಯಕರು ಅಷ್ಟೇ" ಎಂದು ಹೇಳಿದರು.