ಬೆಂಗಳೂರು, , ಏ. 25 (DaijiworldNews/AK): ಒಳ ಮೀಸಲಾತಿಗೆ ಸಂಬಂಧಿಸಿ ಎಲ್ಲರನ್ನೂ ಬೀದಿಯಲ್ಲಿ ನಿಲ್ಲಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆಂಬ ರೀತಿಯಲ್ಲಿ ತೀರ್ಮಾನವನ್ನು ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ಸರಕಾರ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ತೀರ್ಮಾನ ಮಾಡುವಾಗ ಉಪ ಮುಖ್ಯಮಂತ್ರಿಗಳು ಊರಲ್ಲೇ ಇರಲಿಲ್ಲ; ಬಹುಶಃ ಅವರಿಗೂ ಇದು ತೃಪ್ತಿಕರ ಅಲ್ಲ ಎಂಬುದು ಗೊತ್ತಿತ್ತು ಎಂದು ವಿಶ್ಲೇಷಿಸಿದರು. ಈ ಒಂದು ತೀರ್ಮಾನಕ್ಕೆ ಬರಲು ಇವರಿಗೆ 3 ವರ್ಷ ಬೇಕಾಗಿದೆ. ಮೂರೇ ತಿಂಗಳಲ್ಲಿ ಮಾಡಬಹುದಿತ್ತಲ್ಲವೇ ಎಂದು ಕೇಳಿದರು.
4 ಲಕ್ಷ ಹುದ್ದೆ ತುಂಬಲು ಒಳ ಮೀಸಲಾತಿ ಆಗಬೇಕಿತ್ತು. ಎರಡು ಗಂಡಾಂತರಕ್ಕೆ ಸರಕಾರ ಸಿಕ್ಕಿ ಹಾಕಿಕೊಂಡಿತ್ತು. ಒಂದು ಖಾಜಿ ನ್ಯಾಯದ ತೀರ್ಮಾನ ಇದು; ಪರಿಶಿಷ್ಟ ಜಾತಿಗಳು ಬೀದಿಗೆ ಬಿದ್ದ ಹಾಗಾಗಿದೆ ಎಂದು ತಿಳಿಸಿದರು. ಯುವಜನರು 56 ಸಾವಿರಕ್ಕೂ ಹೆಚ್ಚು ಹುದ್ದೆ ಭರ್ತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ವಿವರಿಸಿದರು.
ಸಚಿವರು ಜನಾಂಗದ ಪರವಾಗಿ ನಿಲ್ಲಬೇಕಿತ್ತು. ಕಾಂಗ್ರೆಸ್ಸಿನ ಪರವಾಗಿ ಅಲ್ಲ; ಮೀಸಲಾತಿ ಕೇಳುವಲ್ಲಿ ಕಾಂಗ್ರೆಸ್ ಸಚಿವರು ಸಂಪೂರ್ಣವಾಗಿ ಎಡವಿದ್ದಾರೆ. ಇವರು ಸಮಾಜಗಳಿಗೆ ಅನ್ಯಾಯ, ದೋಖಾ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಇದು ಕೋರ್ಟಿನಲ್ಲಿ ನಿಲ್ಲುವುದಿಲ್ಲ; ನಾವಿದನ್ನು ವಿರೋಧಿಸುತ್ತೇವೆ ಎಂದರು.
ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ಒಳ ಮೀಸಲಾತಿ ವಿಚಾರಕ್ಕೆ ಕೊನೆ ಮೊಳೆಯನ್ನು 3 ವರ್ಷಗಳ ಬಳಿಕ ಹೊಡೆದಿದ್ದಾರೆ ಎಂದರು. ದಲಿತರ ದಿಕ್ಕು ತಪ್ಪಿಸುವ ತೀರ್ಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನು ವಿರೋಧಿಸಿ ಬಿಜೆಪಿ ಹೋರಾಟ ಮಾಡಲಿದೆ ಎಂದರು.