ಕೊಡಗು, ಆ.21(Daijiworld News/SS): ಕೊಡಗಿನಲ್ಲಿ ಆಗಸ್ಟ್ 21 ಮತ್ತು 22ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೆಲ ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿ ರಾಜ್ಯದ ಪ್ರವಾಹಪೀಡಿತ ಸ್ಥಳಗಳಲ್ಲಿ ನೀರಿನ ಮಟ್ಟ ಇಳಿಯುತ್ತಿದೆ. ಆದರೆ ಕೊಡಗಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಡಗಿನಲ್ಲಿ ಮಳೆಗೆ ಗುಡ್ಡ ಕುಸಿತದ ಪ್ರಮಾಣ ಹೆಚ್ಚಾಗಿ ಆಗುವುದರಿಂದ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಕೊಡಗಿಗೆ ಆಗಮಿಸುವ ಪ್ರವಾಸಿಗರೂ ಕೂಡ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿಜಾಯ್ ಹೇಳಿದ್ದಾರೆ.
ಕರ್ನಾಟಕದ ಮಲೆನಾಡು, ಕರಾವಳಿ ಜಿಲ್ಲೆಗಳು, ಕೊಡಗು, ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗಿ ಪ್ರವಾಹ ಉಂಟಾಗಿತ್ತು. ಇದರಿಂದ 60ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಸಾವಿರಾರು ಕೋಟಿ ರೂ. ನಷ್ಟವಾಗಿತ್ತು. ಮನೆ, ಜಮೀನುಗಳು ಕೊಚ್ಚಿಹೋಗಿದ್ದವು. ಭಾರೀ ಮಳೆಯಿಂದ ಕಳೆದ ವರ್ಷ ಕೊಡಗು ತತ್ತರಿಸಿತ್ತು. ಅದೆಷ್ಟೋ ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಈ ಬಾರಿಯೂ ಕೂಡ ಅಲ್ಲಿ ಮಳೆಯಾಗಿದೆ. ಈಗ ಮತ್ತೆ ಹವಾಮಾನ ಇಲಾಖೆ ನೀಡಿರುವ ವರದಿಯಿಂದ ಜನರಲ್ಲಿ ಸ್ವಲ್ಪ ಆತಂಕ ಮೂಡಿದೆ.