ಒಡಿಶಾ, ಏ. 25 (DaijiworldNews/TA): ವಿಷಕಾರಿ ಹಾವಿನಿಂದ 30ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ ಬಳಿಕ ಒಂದು ಬೀದಿ ನಾಯಿ ಮರಣವನ್ನಪ್ಪಿದ ಘಟನೆ ಒಡಿಶಾ ರಾಜ್ಯದಲ್ಲಿ ನಡೆದಿದೆ. ‘ಕಾಳಿ’ ಎಂದು ಕರೆಯಲ್ಪಡುತ್ತಿದ್ದ ಈ ನಾಯಿಯ ಸಾಹಸ ಸ್ಥಳೀಯರ ಮನಸ್ಸನ್ನು ಗೆದ್ದಿದೆ. ನಾಯಿ ಸಾವಿನಿಂದ ಗ್ರಾಮಸ್ಥರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

ಮಯೂರ್ಭಂಜ್ ಜಿಲ್ಲೆಯ ಧೀರಕುಲ ಗ್ರಾಮದಲ್ಲಿ ವಾಸವಾಗಿದ್ದ ಕಾಳಿ, ಆ ಪ್ರದೇಶದ ಜನರಿಗೆ ಬಹಳ ಆತ್ಮೀಯವಾಗಿತ್ತು. ಸೋಮವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ಹತ್ತಿರದ ಶ್ರೀ ಜಗನ್ನಾಥ ಶಿಶು ವಿದ್ಯಾ ಮಂದಿರ ಶಾಲೆಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಆವರಣದ ಹೊರಗೆ ಕುಳಿತಿದ್ದಾಗ, ವಿಷಕಾರಿ ಹಾವು ಅವರತ್ತ ಬರುತ್ತಿತ್ತು. ಈ ಅಪಾಯವನ್ನು ಗಮನಿಸಿದ ಕಾಳಿ ನಾಯಿ ತಕ್ಷಣ ಹಾವಿನ ಮೇಲೆ ದಾಳಿ ಮಾಡಿ ಮಕ್ಕಳ ಹತ್ತಿರ ಬರದಂತೆ ತಡೆಯಿತು.
ಹಾವು ಕಚ್ಚಿದರೂ ಹಿಂಜರಿಯದೆ ಧೈರ್ಯದಿಂದ ಹೋರಾಡಿದ ಕಾಳಿ, ಆ ಹಾವನ್ನು ಕೊಂದು ಮಕ್ಕಳ ಪ್ರಾಣ ಉಳಿಸಿತು. ಆದರೆ ಈ ಹೋರಾಟದ ವೇಳೆ ಹಾವು ಕಾಳಿಯ ಬಾಯಿಗೆ ಕಚ್ಚಿದ್ದು, ಅದರ ವಿಷದಿಂದ ನಾಯಿ ಸಾವನ್ನಪ್ಪಿದೆ. ಈ ಘಟನೆ ಕಂಡ ಮಕ್ಕಳು ಭಯದಿಂದ ನಡುಗಿದ್ದರೂ, ಕಾಳಿಯ ಸಾಹಸದಿಂದ ಎಲ್ಲರೂ ಸುರಕ್ಷಿತವಾಗಿದ್ದರು. ಈ ಘಟನೆಯಿಂದ ಸ್ಥಳೀಯರು ದುಃಖಿತರಾಗಿ, ಆ ನಾಯಿಗೆ ಗೌರವ ಸಲ್ಲಿಸಲು ನಿರ್ಧರಿಸಿದರು.
ಗ್ರಾಮಸ್ಥರು ಕಾಳಿಯ ಅಂತ್ಯಕ್ರಿಯೆಯನ್ನು ಮೆರವಣಿಗೆ ರೂಪದಲ್ಲಿ ನಡೆಸಿದರು. ನಾಯಿಯ ದೇಹವನ್ನು ಟ್ರಾಲಿಯಲ್ಲಿ ಇಟ್ಟು, ಹೂವಿನಿಂದ ಅಲಂಕರಿಸಿ, ಬಿಳಿ ಬಟ್ಟೆಯಲ್ಲಿ ಸುತ್ತಿ, ಸಂಪೂರ್ಣ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡಲಾಯಿತು. ಈ ಮೂಲಕ ಕಾಳಿಯ ತ್ಯಾಗಕ್ಕೆ ಗ್ರಾಮಸ್ಥರು ಭಾವಪೂರ್ಣ ನಮನ ಸಲ್ಲಿಸಿದರು. ಮಾನವೀಯತೆಯ ಸಂಕೇತವಾಗಿದ್ದ ಈ ಬೀದಿ ನಾಯಿ ತನ್ನ ಪ್ರಾಣವನ್ನೇ ಬಲಿ ನೀಡಿ ಮಕ್ಕಳನ್ನು ಕಾಪಾಡಿದ ಘಟನೆ, ಎಲ್ಲರ ಮನಸ್ಸಿನಲ್ಲಿ ಅಳಿಸದ ಗುರುತು ಮೂಡಿಸಿದೆ.