ಬೆಂಗಳೂರು, ಏ. 25 (DaijiworldNews/TA): ಸಚಿವ ಡಿ. ಸುಧಾಕರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಸುಧಾಕರ್ ಅವರ ಆರೋಗ್ಯದ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಚಿವ ಡಿ. ಸುಧಾಕರ್ ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಶ್ವಾಸಕೋಶ ಕಸಿ ಮಾಡುವ ಸಾಧ್ಯತೆ ಬಗ್ಗೆ ವೈದ್ಯರು ಚಿಂತನೆ ನಡೆಸುತ್ತಿದ್ದು, ಅದಕ್ಕೆ ಮೊದಲು ರೋಗಿಯ ಮೆದುಳು ಪ್ರಜ್ಞಾವಂತವಾಗಿರಬೇಕು ಎಂದು ಹೇಳಿದ್ದಾರೆ. ಪ್ರಜ್ಞೆ ಬಂದ ನಂತರವೇ ಮುಂದಿನ ಚಿಕಿತ್ಸೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ವೆಂಟಿಲೇಟರ್ನಲ್ಲಿ ಇಡಲಾಗಿರುವ ಸುಧಾಕರ್ ಅವರ ದೇಹದ ಇತರೆ ಅಂಗಾಂಗಗಳು ಸ್ಥಿರವಾಗಿದ್ದರೂ, ಮೆದುಳು ಇನ್ನೂ ಸ್ಪಂದಿಸಿಲ್ಲ ಎಂದು ಮಾಹಿತಿ ನೀಡಲಾಗಿದೆ. ನಾಳೆ (ಏಪ್ರಿಲ್ 26) ವೈದ್ಯರು ಸಿಟಿ ಸ್ಕ್ಯಾನ್ ನಡೆಸಲಿದ್ದು, ಅದರ ವರದಿ ಆಧಾರದಲ್ಲಿ ಅವರ ಮುಂದಿನ ಆರೋಗ್ಯ ಸ್ಥಿತಿ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಸಿಎಂ ಹೇಳಿದರು. ಸಚಿವರ ಆರೋಗ್ಯದ ಕುರಿತು ರಾಜ್ಯದಾದ್ಯಂತ ಆತಂಕ ವ್ಯಕ್ತವಾಗಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಲವರು ಪ್ರಾರ್ಥಿಸುತ್ತಿದ್ದಾರೆ.