ನವದೆಹಲಿ, ಏ. 26 (DaijiworldNews/TA): ಭಾರತದ ಸ್ಥಿರ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಸೌರಶಕ್ತಿ ಮತ್ತು ಪವನ ಶಕ್ತಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್ ಸಂರಕ್ಷಣೆ ಮಾಡುವುದರ ಜೊತೆಗೆ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಹೆಚ್ಚಿಸಬೇಕೆಂದು ನಾಗರಿಕರಿಗೆ ಕರೆ ನೀಡಿದರು.

ಜಾಗತಿಕ ಮಟ್ಟದಲ್ಲಿ ಭಾರತದ ಸಾಂಸ್ಕೃತಿಕ ಪ್ರಭಾವವನ್ನು ಉಲ್ಲೇಖಿಸಿದ ಪ್ರಧಾನಿ, ದಕ್ಷಿಣ ಅಮೆರಿಕದ ಚಿಲಿನಲ್ಲಿ ಒಂದು ಸಂಸ್ಥೆ ಭಗವಾನ್ ಬುದ್ಧನ ಬೋಧನೆಗಳನ್ನು ಪ್ರಚಾರ ಮಾಡುತ್ತಿರುವುದನ್ನು ಪ್ರಶಂಸಿಸಿದರು. ಲಡಾಖ್ ಮೂಲದ ಡ್ರುಬ್ಬನ್ ಓಟ್ಜರ್ ರಿನ್ಪೋಚೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
2027ರ ಜನಗಣತಿಯನ್ನು ದೇಶದ ಅಭಿವೃದ್ಧಿಗೆ ದಿಕ್ಸೂಚಿ ಎಂದು ವಿವರಿಸಿದ ಪ್ರಧಾನಿ, ಇದು ಕೇವಲ ಸರ್ಕಾರದ ಕಾರ್ಯವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದರು. ಈ ಬಾರಿ ಗಣತಿದಾರರು ಮೊಬೈಲ್ ಆಪ್ ಮೂಲಕ ಮನೆಮನೆಗೆ ಭೇಟಿ ನೀಡಲಿದ್ದು, ನಾಗರಿಕರು 15 ದಿನಗಳ ಮುಂಚಿತವಾಗಿ ತಮ್ಮ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಬಹುದಾಗಿದೆ. ನಂತರ ದೊರೆಯುವ ವಿಶೇಷ ಐಡಿಯನ್ನು ಸಿಬ್ಬಂದಿಗೆ ತೋರಿಸಿದರೆ ಸಾಕು ಎಂದು ತಿಳಿಸಿದರು.
ಅಮೆರಿಕ-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಗೌತಮ ಬುದ್ಧ ಅವರ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಸ್ಮರಿಸಿದ ಪ್ರಧಾನಿ, “ಇದು ಯುದ್ಧದ ಯುಗವಲ್ಲ” ಎಂದು ಪುನರುಚ್ಚರಿಸಿದರು. ಇದೇ ವೇಳೆ, ತಮಿಳುನಾಡಿನ ಕಲ್ಪಾಕಂನಲ್ಲಿರುವ ‘ಫಾಸ್ಟ್ ಬ್ರೀಡರ್ ರಿಯಾಕ್ಟರ್’ ಸಾಧನೆಯನ್ನು ಪ್ರಧಾನಿ ಶ್ಲಾಘಿಸಿದರು. ಭಾರತದ ಪರಮಾಣು ವಿಜ್ಞಾನಿಗಳ ಸಾಧನೆ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದಿದ್ದು, ಇದು ನಾಗರಿಕ ಪರಮಾಣು ಕಾರ್ಯಕ್ರಮದ ಐತಿಹಾಸಿಕ ಮೈಲಿಗಲ್ಲು ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತದ ವಿದ್ಯಾರ್ಥಿಗಳು ಮೆರೆದಿದ್ದಾರೆ. ಬೋರ್ಡೆಕ್ಸ್ ನಲ್ಲಿ ನಡೆದ ಯುರೋಪಿಯನ್ ಬಾಲಕಿಯರ ಗಣಿತ ಒಲಿಂಪಿಯಾಡ್ನಲ್ಲಿ ಭಾರತೀಯ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ವಿಶ್ವದಲ್ಲಿ ಆರನೇ ಸ್ಥಾನ ಪಡೆದಿದ್ದು, ಇದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.