ನವದೆಹಲಿ, ಏ. 26 (DaijiworldNews/TA): ಕೇಂದ್ರ ಸರ್ಕಾರದ ಪ್ರಮುಖ ಚಿಂತನ ವೇದಿಕೆಯಾದ ನೀತಿ ಆಯೋಗಗೆ ಹೊಸ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಲಾಹಿರಿ ಅವರನ್ನು ನೇಮಕ ಮಾಡಲಾಗಿದೆ. ಹಾಲಿ ಉಪಾಧ್ಯಕ್ಷರಾಗಿದ್ದ ಸುಮನ್ ಬೆರಿ ಅವರ ಸ್ಥಾನವನ್ನು ಲಾಹಿರಿ ಭರ್ತಿ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ನೀತಿ ಆಯೋಗದಲ್ಲಿ ಉಪಾಧ್ಯಕ್ಷರ ಹುದ್ದೆ ಅತ್ಯಂತ ಮಹತ್ವದ್ದಾಗಿದೆ. ಸಂಸ್ಥೆಯ ನೀತಿ ರೂಪಣೆ, ಚಿಂತನೆ ಮತ್ತು ಶಿಫಾರಸುಗಳ ಪ್ರಮುಖ ಹೊಣೆಗಾರಿಕೆ ಉಪಾಧ್ಯಕ್ಷರ ಮೇಲಿದೆ.
ಅಶೋಕ್ ಕುಮಾರ್ ಲಾಹಿರಿ ಅವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದು, ಆಡಳಿತ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿದ್ದಾರೆ. ಇವರು ಈ ಹಿಂದೆ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ಪಶ್ಚಿಮ ಬಂಗಾಳದ ಬಾಲೂರಘಾಟ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರು.
2002ರಿಂದ 2007ರವರೆಗೆ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಗಳಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. 15ನೇ ಹಣಕಾಸು ಆಯೋಗದ ಸದಸ್ಯರಾಗಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಶೈಕ್ಷಣಿಕವಾಗಿ, ಇವರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪಡೆದಿದ್ದು, ಆರ್ಥಿಕ ನೀತಿ ರೂಪಣೆಯಲ್ಲಿ ಪರಿಣತರಾಗಿ ಗುರುತಿಸಿಕೊಂಡಿದ್ದಾರೆ.
ನೀತಿ ಆಯೋಗವು 2015ರಲ್ಲಿ ಸ್ಥಾಪನೆಯಾದ ಬಳಿಕ ಹಲವಾರು ಗಣ್ಯರು ಈ ಹುದ್ದೆ ಅಲಂಕರಿಸಿದ್ದಾರೆ. ಮೊದಲ ಉಪಾಧ್ಯಕ್ಷರಾಗಿದ್ದ ಅರವಿಂದ್ ಪನಗರಿಯಾ (2015-2017), ನಂತರ ರಾಜೀವ್ ಕುಮಾರ್ (2017-2022) ಹಾಗೂ ಇತ್ತೀಚೆಗೆ ಸುಮನ್ ಬೆರಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ನೀತಿ ಆಯೋಗವು ದೇಶದ ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವ ಪ್ರಮುಖ ಚಿಂತನ ವೇದಿಕೆಯಾಗಿದ್ದು, ಪ್ರಧಾನಮಂತ್ರಿಯವರು ಇದರ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರನ್ನು ಪ್ರಧಾನಿಯವರೇ ನೇಮಕ ಮಾಡುತ್ತಾರೆ. ಅಶೋಕ್ ಕುಮಾರ್ ಲಾಹಿರಿಯವರ ನೇಮಕವು ಭಾರತದ ಆರ್ಥಿಕ ಯೋಜನೆಗಳು ಮತ್ತು ಸುಧಾರಣೆಗಳಿಗೆ ಹೊಸ ಚೈತನ್ಯ ನೀಡುವ ನಿರೀಕ್ಷೆಯನ್ನು ಮೂಡಿಸಿದೆ.