ಚಿಕ್ಕಮಗಳೂರು, ಆ.21(Daijiworld News/SS): ಶಾಸಕರಾದ ಸಿ.ಟಿ.ರವಿ ಮತ್ತು ಮಾಧು ಸ್ವಾಮಿ ಇಂದು ಜಿಲ್ಲೆಯ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಟಿ.ರವಿ ಮತ್ತು ಮಾಧು ಸ್ವಾಮಿ ಮೂಡಿಗೆರೆ ತಾಲೂಕಿನ ಬಣಕಲ್, ಬಾಳೂರು ಹೊರಟ್ಟಿ, ಮಲೆಮನೆ, ದುರ್ಗದಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಹಳ್ಳಿಗಾಡು ಪ್ರದೇಶಗಳಿಗೆ ತೆರಳಿ ಜನರ ಸಂಕಷ್ಟ ಆಲಿಸಿದ್ದಾರೆ.
ಜನರ ಕಷ್ಟಗಳನ್ನು ಆಲಿಸಿದ ಸಚಿವ ಸಿ.ಟಿ.ರವಿ ಪ್ರವಾಹದಿಂದ ತತ್ತರಿಸಿದ ದುಸ್ಥಿತಿಗೆ ಮರುಗಿ ಕಣ್ಣೀರು ಹಾಕಿದ್ದಾರೆ. ಮಲೆನಾಡಿನ ಸದ್ಯದ ಪರಿಸ್ಥಿತಿಯನ್ನು ಕಂಡು ಮಾಧುಸ್ವಾಮಿ ಆಶ್ಚರ್ಯ ವ್ಯಕ್ತಪಡಿಸಿದರು. ಪ್ರವಾಹ ಮತ್ತು ಭೂಕುಸಿತದಿಂದ ಮನೆ, ಜಮೀನು ಕಳೆದುಕೊಂಡ ಸಂತ್ರಸ್ತರನ್ನು ಸಚಿವರು ಸಂತೈಸಿದರು. ಸಚಿವ ಮಾಧುಸ್ವಾಮಿ ಮತ್ತು ಸಿ.ಟಿ. ರವಿ ಅವರಿಗೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಸಿ.ಟಿ. ರವಿ, ಕೇವಲ 8 ದಿನಗಳ ನಿರಂತರ ಮಳೆ ಮಲೆನಾಡು ತಾಲೂಕುಗಳಲ್ಲಿ, ಅದರಲ್ಲೂ ಮೂಡಿಗೆರೆ ತಾಲೂಕಿನಲ್ಲಿ ಆಗಾಧ ಪ್ರಮಾಣದಲ್ಲಿ ಹಾನಿಯುಂಟು ಮಾಡಿ, 1970 ಮಂದಿ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತಾಗಿದೆ. ಮೊದಲು ಪರಿತಪಿಸುತ್ತಿರುವ ಸಂತ್ರಸ್ತರ ಬದುಕಿಗೆ ಸರ್ಕಾರ ಆಸರೆಯಾಗಿ ನಿಂತು ಅವರನ್ನು ಈ ಪರಿಸ್ಥಿತಿಯಿಂದ ಮೇಲೆತ್ತಿ ಅವರ ಬದುಕನ್ನು ಹಳಿಯ ಮೇಲೆ ಕೂರಿಸಬೇಕಾಗಿದೆ ಎಂದು ಹೇಳಿದರು.