ಬೆಂಗಳೂರು, ಏ. 26 (DaijiworldNews/AK): ನಾಯಕತ್ವದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನು, ಸಿಎಂ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೆಹಲಿಗೆ ಹೋದ ವಿಚಾರವಿರಲಿ ನಾನು ಇನ್ನು ಮುಂದೆ ರಾಜಕೀಯ ವಿಚಾರಗಳನ್ನ ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಸಮಯ ಬಂದಾಗ ಅದಾಗಿ ಅದೇ ಗೊತ್ತಾಗುತ್ತೆ. ನಮ್ಮಲ್ಲಿ ಯಾವುದೇ ಸಮಸ್ಯೆಯೂ ಇಲ್ಲ. ಯಾವ ರಾಜಕೀಯ ಇಲ್ಲ. ಏನೇನು ಯಾವಾಗ ಯಾವಾಗ ಆಗಬೇಕು ಆವಾಗ ಆಗುತ್ತೆ. ಏನೇನು ತೀರ್ಮಾನಗಳು ಆಗಿದ್ದಾವೋ ಅದು ಚಾಲ್ತಿಗೆ ಬರುತ್ತೆ ಎಂದು ತಿಳಿಸಿದರು.
ಪಕ್ಷದಲ್ಲಿ ಗೊಂದಲಗಳು ಇವೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಪಾರ್ಟಿಯಲ್ಲಿ ಯಾವ ಸಮಯದಲ್ಲಿ ಏನು ಮಾಡಬೇಕು ಆವಾಗ ಮಾಡುತ್ತಾರೆ. ನಮಗೆ ನಮ್ಮ ಪಕ್ಷದ ಮೇಲೆ ವಿಶ್ವಾಸ ಇದೆ. ಏನು ಮಾಡಬೇಕು ಅವರಿಗೆ ಗೊತ್ತಿದೆ. ನಾಯಕತ್ವ ಬದಲಾವಣೆ ವಿಚಾರ ನಿಮಗೇನಾದರೂ ಇರಬಹುದು. ನಾನು ಯಾವತ್ತು ಚರ್ಚೆ ಮಾಡಲು ಹೋಗಿಲ್ಲ. ಹೈಕಮಾಂಡ್ ಯಾವಾಗ ಹೇಳುತ್ತಾರೆ ಆವಾಗ ಅದರಂತೆ ನಡೆದುಕೊಳ್ಳುತ್ತೇವೆ ಎಂದರು.
ನಾವು ಕೊಟ್ಟ ಮಾತಿನಂತೆ ಒಳಮೀಸಲಾತಿ ಜಾರಿ ಮಾಡಿದ್ದೇವೆ. ಒಳಮೀಸಲಾತಿಯನ್ನು ಬಿಜೆಪಿ ಟೀಕೆ ಮಾಡುತ್ತಿದೆ. ಬಿಜೆಪಿಯವರ ಕೈಯಲ್ಲಿ ಏನು ಮಾಡಲು ಆಗಿಲ್ಲ ಎಂದರು.