ಉತ್ತರಾಖಂಡ್, ಆ.21(Daijiworld News/SS): ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಖಾಸಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡ್'ನ ಉತ್ತರಕಾಶಿಯಲ್ಲಿ ನಡೆದಿದೆ.
ಕ್ಯಾಪ್ಟನ್, ಸಹ ಪೈಲಟ್ ಸೇರಿದಂತೆ ಓರ್ವ ಸ್ಥಳೀಯ ನಾಗರಿಕ ಈ ದುರಂತ ಘಟನೆಯಲ್ಲಿ ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.
ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿ ಹೊತ್ತು ಡೆಹ್ರಾಡೂನ್ನಿಂದ ಉತ್ತರಕಾಶಿಯ ಮೋರಿಗೆ ಆಗಮಿಸುತ್ತಿದ್ದ ಹೆಲಿಕಾಪ್ಟರ್, ಮೋಲ್ಡಿ ಸಮೀಪ ಅಪಘಾತಕ್ಕೀಡಾಗಿರುವುದಾಗಿ ಉತ್ತರಕಾಶಿ ವಿಪತ್ತು ನಿರ್ವಹಣಾ ಮಂಡಳಿ ಅಧಿಕಾರಿ ದೇವೇಂದ್ರ ಪಾಟ್ವಾಲ್ ತಿಳಿಸಿದ್ದಾರೆ.
ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಮೃತರ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಉತ್ತಾರಖಂಡ್ ರಾಜ್ಯದಲ್ಲಿ ಪ್ರವಾಸ ಸ್ಥಿತಿ ನಿರ್ಮಾಣವಾಗಿದ್ದು, ನೆರೆ ಪೀಡಿತ ಪ್ರದೇಶಗಳಲ್ಲಿ ಮೂರು ಹೆಲಿಕಾಪ್ಟರ್ಗಳು ಪರಿಹಾರ ಕಾರ್ಯ ಆರಂಭಿಸಿದ್ದವು. ಸದ್ಯ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಹೆರಿಟೇಜ್ ಏವಿಯೇಷನ್ಗೆ ಸೇರಿದ್ದು, ಇದರಲ್ಲಿ ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿ ಹೊತ್ತು ಮೂವರು ಪ್ರವಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.