ಕೊಡಗು, ಏ. 28 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಕೊಡಗಿನ ಗಡಿಯಂಚಿನ ಬೈಲುಕುಪ್ಪೆಯ ಟಿಬೆಟನ್ ಸಮುದಾಯ ನಿರ್ಮಿಸಿರುವ ಖಾಸಗಿ ಅರಣ್ಯವನ್ನು ಶ್ಲಾಘಿಸಿದ್ದಾರೆ. ಈ ಪ್ರಶಂಸೆ ಸ್ಥಳೀಯರಲ್ಲಿ ಸಂತಸ ಮೂಡಿಸಿದ್ದು, ಸಾಮಾಜಿಕ ವಲಯದಲ್ಲೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟನ್ ಕ್ಯಾಂಪ್ನಲ್ಲಿರುವ ‘ಎಕೋ ನಳಂದ’ ಅರಣ್ಯದ ಸಂಸ್ಥಾಪಕ ಕರ್ಮ ಸಮ್ತೆನ್ಲಿಂಗ್ಪ ರಿನ್ಪೊಚೆ ಈ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಶಕಗಳಿಂದ ನಿರಂತರ ಶ್ರಮವಹಿಸಿ, 100 ಎಕರೆ ಬರಡು ಭೂಮಿಯನ್ನು ದಟ್ಟ ಅರಣ್ಯವನ್ನಾಗಿ ರೂಪಿಸಿರುವುದು ಅವರ ಸಾಧನೆ.
ವಿಶ್ವದ ವಿವಿಧ ಭಾಗಗಳಿಂದ ತರಲಾದ ಔಷಧೀಯ ಗಿಡಗಳನ್ನು ಇಲ್ಲಿ ಬೆಳೆಸಿರುವ ಅವರು, “ಭಾರತ ನಮಗೆ ನೀಡಿದ ಆಶ್ರಯಕ್ಕೆ ಇದು ನಮ್ಮ ಕೃತಜ್ಞತೆಯ ಕಾಣಿಕೆ” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. ಈ ಅರಣ್ಯವು ನೂರಾರು ಪಕ್ಷಿ ಸಂಕುಲಗಳಿಗೆ ಆಶ್ರಯತಾಣವಾಗಿದ್ದು, ಸ್ಥಳೀಯ ವಾತಾವರಣದ ತಾಪಮಾನವನ್ನು ಕಡಿಮೆ ಮಾಡಲು ಸಹ ಕಾರಣವಾಗಿದೆ. ಪ್ರಧಾನಿ ಮೋದಿ ಅವರ ಮೆಚ್ಚುಗೆ ನಮಗೆ ಇನ್ನಷ್ಟು ಪ್ರೇರಣೆ ನೀಡಿದೆ ಎಂದು ರಿನ್ಪೊಚೆ ತಿಳಿಸಿದ್ದಾರೆ.