ಒಡಿಶಾ, ಏ. 28 (DaijiworldNews/TA): ನಗರದಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆ ದೇಶದ ಸಾಮಾಜಿಕ ವಾಸ್ತವ್ಯವನ್ನು ಮತ್ತೊಮ್ಮೆ ಹೊರಹಾಕಿದೆ. ಮೃತ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 20 ಸಾವಿರ ರೂಪಾಯಿಯನ್ನು ಹಿಂಪಡೆಯಲು ಸಹೋದರನೊಬ್ಬ ಬ್ಯಾಂಕ್ಗೆ ತೆರಳಿದ್ದ. ಆದರೆ, ಡೆತ್ ಸರ್ಟಿಫಿಕೇಟ್ ಇಲ್ಲದೆ ಹಣ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಸ್ಪಷ್ಟಪಡಿಸಿದರು.

ಮರಣ ಪ್ರಮಾಣಪತ್ರದ ಅಗತ್ಯದ ಬಗ್ಗೆ ಅರಿವಿಲ್ಲದ ಆ ವ್ಯಕ್ತಿ, ಪಂಚಾಯತ್ ಕಚೇರಿಗೆ ತೆರಳಿ ಅದನ್ನು ಪಡೆಯಲು ಯತ್ನಿಸಿದ. ಆದರೆ ವಿವಿಧ ಕಾರಣಗಳಿಂದ ಅಧಿಕಾರಿಗಳು ಪ್ರಮಾಣಪತ್ರ ನೀಡುವುದರಲ್ಲಿ ವಿಳಂಬ ಮಾಡಿದರು. ಈ ನಡುವೆ ಹಲವಾರು ಬಾರಿ ಬ್ಯಾಂಕ್ಗೆ ಹೋಗಿ ಮನವಿ ಮಾಡಿದರೂ, “ಡೆತ್ ಸರ್ಟಿಫಿಕೇಟ್ ತರಬೇಕು” ಎಂಬ ಕಠಿಣ ಉತ್ತರವೇ ಸಿಕ್ಕಿತು.
ಕೊನೆಗೆ ಅಸಹಾಯಕನಾದ ಆತ, ಸಮಾಧಿಯನ್ನು ಅಗೆದು ತನ್ನ ಸಹೋದರಿಯ ಅಸ್ಥಿಪಂಜರವನ್ನು ತೆಗೆದುಕೊಂಡು ಬಂದು ಬ್ಯಾಂಕ್ ಮುಂದೆ ಹಾಜರುಪಡಿಸಿದ. “ಅಕ್ಕನನ್ನು ತಂದಿದ್ದೇನೆ, ಇನ್ನು ಹಣ ಕೊಡಿ” ಎಂದು ಬೇಡಿಕೊಳ್ಳುತ್ತಿರುವ ಆತನ ದೃಶ್ಯ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ಈ ಘಟನೆ ಕೇವಲ ಒಂದು ವಿಚಿತ್ರ ಘಟನೆ ಅಲ್ಲ, ಇದು ದೇಶದ ಜನರ ವಾಸ್ತವ್ಯವನ್ನು ತೋರಿಸುವ ಕನ್ನಡಿ. ಜನನ, ಮರಣ, ಆದಾಯ, ಆಸ್ತಿ ಮುಂತಾದ ಮೂಲಭೂತ ದಾಖಲೆಗಳ ಬಗ್ಗೆ ಇಂದಿಗೂ ಅನೇಕರು ಅರಿವು ಹೊಂದಿಲ್ಲ. ಒಂದು ಕಡೆ ತಂತ್ರಜ್ಞಾನ, ಡಿಜಿಟಲ್ ಇಂಡಿಯಾ, ಅಭಿವೃದ್ಧಿ ಎಂಬ ಮಾತುಗಳು ಕೇಳಿಸುತ್ತಿರುವಾಗ, ಇನ್ನೊಂದು ಕಡೆ ಮೂಲಭೂತ ಆಡಳಿತ ಕ್ರಮಗಳೇ ಜನರಿಗೆ ಅಸ್ಪಷ್ಟವಾಗಿವೆ.
ಸಮಾಜದಲ್ಲಿ ವಿದ್ಯಾವಂತ - ಅನಕ್ಷರಸ್ಥ, ಶ್ರೀಮಂತ-ಬಡವ, ಅಧಿಕಾರಿ-ಪ್ರಜೆ ಎಂಬ ಅಂತರ ಇನ್ನೂ ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಒಂದು ವರ್ಗ ತಂತ್ರಜ್ಞಾನಕ್ಕೆ ವೇಗವಾಗಿ ಹೊಂದಿಕೊಳ್ಳುತ್ತಿರುವಾಗ, ಮತ್ತೊಂದು ವರ್ಗ ಅದೇ ವೇಗಕ್ಕೆ ಹೆಜ್ಜೆ ಹಾಕಲು ಸಾಧ್ಯವಾಗದೆ ಹಿಂದುಳಿಯುತ್ತಿದೆ.
ಈ ಅಂತರ ಕಡಿಮೆಯಾಗುವವರೆಗೂ, ಡೆತ್ ಸರ್ಟಿಫಿಕೇಟ್ ಬದಲು ಅಸ್ಥಿಪಂಜರವನ್ನು ಪುರಾವೆಯಾಗಿ ತೋರಿಸುವಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ. ನಮ್ಮ ಜ್ಞಾನ, ಸಂಪನ್ಮೂಲ ಮತ್ತು ವ್ಯವಸ್ಥೆಯನ್ನು ಸಮಾಜದ ಹಿಂದುಳಿದ ವರ್ಗಗಳಿಗೂ ತಲುಪಿಸುವ ಮನೋಭಾವ ಬೆಳೆಸಬೇಕಾದ ಅಗತ್ಯವನ್ನು ಈ ಘಟನೆ ಗಟ್ಟಿಯಾಗಿ ನೆನಪಿಸುತ್ತದೆ.