ಬೆಂಗಳೂರು,ಏ. 29 (DaijiworldNews/AK): 2025–26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇತ್ತೀಚೆಗೆ ಬಿಡುಗಡೆಗೊಂಡಿದೆ. ಈ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಖಾಸಗಿ ಶಾಲಾ-ಕಾಲೇಜುಗಳು ನಾನಾ ಕಸರತ್ತು ನಡೆಸುತ್ತಿವೆ. ವಿಶೇಷವೆಂದರೆ ಸರ್ಕಾರ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕಾಗಿ ಜಾಹೀರಾತು ನೀಡುವ ಮೂಲಕ ಗಮನಸೆಳೆದಿದೆ. ಆ ಮೂಲಕ ರಾಜ್ಯದಲ್ಲಿ ಉತ್ತಮಗುಣಮಟ್ಟದ ಶಿಕ್ಷಣ ಒದಗಿಸುವ ‘ಗ್ಯಾರಂಟಿ’ ನೀಡಿದೆ.

ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆಗೊಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತೇರ್ಗಡೆಯಲ್ಲಿ ದಾಖಲೆಯ ಫಲಿತಾಂಶ ಬಂದಿದೆ. ಪ್ರಸಕ್ತ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕೂಡ ಉತ್ತಮ ಫಲಿತಾಂಶ ದಾಖಲಾಗಿದೆ. ಎಸ್ಎಸ್ಎಲ್ಸಿಯಲ್ಲಿ ಶೇ 94. 10 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 86.48ರಷ್ಟು ಫಲಿತಾಂಶ ಬಂದಿದೆ.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಮತ್ತಷ್ಟು ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲಾ-ಕಾಲೇಜುಗಳತ್ತ ಸೆಳೆಯಲು ಜಾಹಿರಾತು ನೀಡುವ ಮೂಲಕ ಗಮನಸೆಳೆದಿದೆ. ಆ ಮೂಲಕ ರಾಜ್ಯದಲ್ಲಿ ಉತ್ತಮಗುಣಮಟ್ಟ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ‘ಶಿಕ್ಷಣ ಗ್ಯಾರಂಟಿ’ ನೀಡುವ ಭರವಸೆ ನೀಡಿದೆ.
8 ಶಿಕ್ಷಣ ಗ್ಯಾರಂಟಿಗಳು
1: ಶಿಕ್ಷಕರ ಕೊರತೆಗೆ ಮುಕ್ತಿ; 5ನೇ ತರಗತಿಯವರೆಗೆ ಪ್ರತಿ ತರಗತಿಗೆ ಒಬ್ಬರು ಶಿಕ್ಷಕರು ಹಾಗೂ 6ನೇ ತರಗತಿಯಿಂದ ಪ್ರತಿ ವಿಷಯಕ್ಕೂ ಪ್ರತ್ಯೇಕ ವಿಷಯವಾರು ಶಿಕ್ಷಕರ ನೇಮಕಾತಿ.
2: ಪೋಷಕರ ಆಶಯದಂತೆ ಬೋಧನಾ ಮಾಧ್ಯಮ; ಕನ್ನಡದ ಜೊತೆಗೆ ಎಲ್ಲಾ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮ ಲಭ್ಯ. ಇಂಗ್ಲಿಷ್ನಲ್ಲಿ ಬೋಧಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು.
3: ಉಚಿತ ಸಾರಿಗೆ ಸೌಲಭ್ಯ; ಕರ್ನಾಟಕ ಪಬ್ಲಿಕ್ ಶಾಲೆ (KPS) ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.
4: ಡಿಜಿಟಲ್ ಶಿಕ್ಷಣ; 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಹಾಗೂ 3ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ (AI) ಕಲಿಕೆ, ಮುಂದಿನ 3 ವರ್ಷಗಳಲ್ಲಿ ಎಲ್ಲಾ ಕೆ.ಪಿ.ಎಸ್ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರ ನೇಮಕ ಮಾಡಲಾಗುವುದು.
5: ಕಲೆ ಮತ್ತು ದೈಹಿಕ ಶಿಕ್ಷಣ; ಸಂಗೀತ, ಕಲೆ ಮತ್ತು ದೈಹಿಕ ಶಿಕ್ಷಣಕ್ಕಾಗಿ ಶಿಕ್ಷಕರ ನೇಮಕ, ಈ ವರ್ಷದಿಂದಲೇ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.
6: ಶೈಕ್ಷಣಿಕೇತರ ಕೆಲಸಗಳಿಂದ ಮುಕ್ತಿ; ಶೈಕ್ಷಣಿಕೇತರ ಕೆಲಸಗಳ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗುವುದು. ಇದರೊಂದಿಗೆ ಶಿಕ್ಷಕರು ಕೇವಲ ಬೋಧನೆಯ ಮೇಲೆ ಮಾತ್ರ ಗಮನಹರಿಸಲು ಅವಕಾಶ.
7: ಕಲಿಕೆಯ ಗುಣಮಟ್ಟದ ಮೇಲ್ವಿಚಾರಣೆ; ಪ್ರತಿ ಮಗುವಿನ ಪ್ರಗತಿಗಾಗಿ ‘ಪಾಠ ಆಧಾರಿತ ಮೌಲ್ಯಮಾಪನ’ (Lesson Based Assessment) ವ್ಯವಸ್ಥೆ, ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕರು ಮತ್ತು ಶಿಕ್ಷಕರ ಕಡ್ಡಾಯ ಸಭೆ ಮಾಡುವುದು.
8: ಕೌಶಲ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ; 6ನೇ ತರಗತಿಯಿಂದಲೇ ಕೌಶಲ ಶಿಕ್ಷಣ ಪ್ರಾರಂಭಿಸಲಾಗುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿಶೇಷ ತರಬೇತಿ ಸೌಲಭ್ಯ ಒದಗಿಸಲಾಗುವುದು. ಹೀಗೆ 8 ಶಿಕ್ಷಣ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ನೀಡಿದೆ.