ಬೆಂಗಳೂರು, ಏ. 29 (DaijiworldNews/AK): ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಗೆ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 8 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ಕೆಲವರು ಫುಟ್ಪಾತ್ ಬಳಿ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಮೃತಪಟ್ಟವರ ಪೈಕಿ ಪಾದಚಾರಿಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಗೋಡೆ ಕುಸಿದ ಬೆನ್ನಲ್ಲೇ ಅಲ್ಲಿದ್ದ ಸಾರ್ವಜನಿಕರು ರಕ್ಷಣಾ ಕಾರ್ಯ ನಡೆಸಿ ಕೆಲವರನ್ನು ರಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಳೆಯ ಗೋಡೆಗೆ ದೊಡ್ಡ ಟಾರ್ಪಲ್ ಹಾಕಿ ವ್ಯಾಪಾರ ಮಾಡುತ್ತಿದ್ದರು. ದಿಢೀರನೆ ಮಳೆ ಜೋರಾಗಿ ಸುರಿದ ಕಾರಣ ರಕ್ಷಣೆಗೆ ವ್ಯಾಪಾರಿಗಳು ಮತ್ತು ಪಾದಚಾರಿಗಳು ಟಾರ್ಪಲ್ ಆಡಿ ನಿಂತಿದ್ದಾರೆ. ಈ ವೇಳೆ ಬಿರುಗಾಳಿ ಸಹಿತ ಮಳೆಗೆ ಗೋಡೆ ಕುಸಿದಿದೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಶೀಲನೆ ಮಾಡಿದರು. ದುರಂತದ ಬಗ್ಗೆ ಸ್ಥಳೀಯರು, ಜಿಬಿಎ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಒತ್ತಡದಿಂದ ಕಾಂಪೌಂಡ್ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಏಕಾಏಕಿ ಹೇಗೆ ಕುಸಿದು ಬಿತ್ತು ಎಂದು ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡರು. ದುರಂತದ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.