ಗುಜರಾತ್, ಏ. 30 (DaijiworldNews/AK): ಐಎಎಸ್ ಕಾರ್ತಿಕ್ ಜಿವಾನಿ. ಐಐಟಿ ಪದವೀಧರರಾಗಿರುವ ಇವರು ಸತತ ಮೂರು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ಗುಜರಾತ್ ನಿವಾಸಿ ಕಾರ್ತಿಕ್ ಜಿವಾನಿ ಎರಡು ಬಾರಿ ಐಪಿಎಸ್ ಆಗಿ, ಮೂರನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಂಡರು. ಮೊದಲ ಎರಡು ಪ್ರಯತ್ನಗಳಲ್ಲಿ ಅವರು ಐಪಿಎಸ್ ಆಗುತ್ತಾರೆ. ಆದರೆ ಧೈರ್ಯ ಕಳೆದುಕೊಳ್ಳದೆ ಮತ್ತೆ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು ಕೊನೆಗೆ ಐಎಎಸ್ ಅಧಿಕಾರಿಯಾದರು.
ಕಾರ್ತಿಕ್ ಜಿವಾನಿ ಗುಜರಾತಿ ಭಾಷೆಯಲ್ಲಿ 8 ನೇ ತರಗತಿಯವರೆಗೆ ಅಧ್ಯಯನ ಮಾಡಿದರು. ಇದಾದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವೇಶ ಪಡೆದರು. ಅವರು ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು.
ಕಾರ್ತಿಕ್ ತಮ್ಮ ಕನಸುಗಳು ಮತ್ತು ಭವಿಷ್ಯದ ಬಗ್ಗೆ ತುಂಬಾ ಸ್ಪಷ್ಟವಾಗಿದ್ದರು. 12ನೇ ತರಗತಿಯಲ್ಲಿ ತೇರ್ಗಡೆಯಾದ ನಂತರ ಜೆಇಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದರು. ಅವರು ಐಐಟಿ ಬಾಂಬೆಯಲ್ಲಿ ಎಂಜಿನಿಯರಿಂಗ್ ಮಾಡಿದರು.
ಕಾರ್ತಿಕ್ ಜೀವನಿ ತನ್ನ ಇಂಜಿನಿಯರಿಂಗ್ ಓದುವ ಸಮಯದಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅವರು 2016 ರಿಂದ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. 2018 ರಲ್ಲಿ 94 ನೇ ರ್ಯಾಂಕ್ ಮತ್ತು 2019 ರಲ್ಲಿ 84 ನೇ ರ್ಯಾಂಕ್ ನೊಂದಿಗೆ IPS ಅಧಿಕಾರಿಯಾದರು.
ಆದರೆ ಐಎಎಸ್ ಆಗುವುದು ಅವರ ಅಂತಿಮ ಗುರಿಯಾಗಿತ್ತು. ಐಪಿಎಸ್ ತರಬೇತಿ ವೇಳೆ ರಜೆ ಪಡೆದು ಪರೀಕ್ಷೆಗೆ ತಯಾರಿ ನಡೆಸಿದ್ದರು. ಕಾರ್ತಿಕ್ ಜೀವನಿ 2020 ರಲ್ಲಿ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 8 ನೇ ರ್ಯಾಂಕ್ ಗಳಿಸಿದರು. ಈ ಮೂಲಕ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದರು.