ಭೋಪಾಲ್, ಏ. 30 (DaijiworldNews/AA): ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಪಲ್ಟಿ ಹೊಡೆದ ಪಿಕಪ್ ಎಸ್ಯುವಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಮೃತಪಟ್ಟು, ೩೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ 10:30ರ ಸುಮಾರಿಗೆ ಸಂಭವಿಸಿದೆ.

ತಿರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಲಿಯಾ ಬೈಪಾಸ್ ಬಳಿಯ ಇಂದೋರ್-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 46 ಕಾರ್ಮಿಕರನ್ನು ಈ ಪಿಕಪ್ ಹೊತ್ತೊಯ್ಯುತ್ತಿತ್ತು. ಪಿಕಪ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಸಿಕೊಂಡಿದ್ದ ಕಾರಣ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಹಲವು ಬಾರಿ ಪಲ್ಟಿಯಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪಿಕಪ್ನಲ್ಲಿದ್ದ ಕಾರ್ಮಿಕರು ದಿನ ಕೆಲಸದ ನಂತರ ಲೆಬಾದ್ ಪಟ್ಟಣದಿಂದ ತಿರ್ಲಾ ಬಳಿಯ ಸೆಮ್ಲಿಪುರ ಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಪಿಕಪ್ ನಿಯಂತ್ರಣ ತಪ್ಪಿ, ಪಲ್ಟಿಯಾಗಿ ಡಿವೈಡರ್ ದಾಟಿ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಎಸ್ಯುವಿಗೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಪಿಕಪ್ನಲ್ಲಿದ್ದ ಅನೇಕರು ವಾಹನದ ಅಡಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ಇಂದೋರ್ (ಗ್ರಾಮೀಣ) ಡಿಐಜಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಮಧ್ಯಪ್ರದೇಶದ ಧಾರ್ನಲ್ಲಿ ನಡೆದ ಅಪಘಾತದಲ್ಲಿ ಜೀವಹಾನಿಯಾದ ಸುದ್ದಿ ಕೇಳಿ ತೀವ್ರ ನೋವುಂಟಾಗಿದೆ. ಈ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಸಂಬಂಧಿಕರಿಗೆ ಪಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ತಲಾ 50,000 ರೂ. ಆರ್ಥಿಕ ನೆರವು ನೀಡಲಾಗುವುದು" ಎಂದು ತಿಳಿಸಿದ್ದಾರೆ.