ತುಮಕೂರು,ಏ. 30 (DaijiworldNews/AK): ಅಪ್ರತಿಮ ಹೋರಾಟಗಾರ, ರೈತ ನಾಯಕ, ಬಡವರ ಕಣ್ಮಣಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ವರ್ಷಗಳ ಪಯಣ ಪೂರೈಸಿದ ಶುಭ ಘಳಿಗೆಯಲ್ಲಿ ಬಿ.ಎಸ್.ವೈ ಅವರ ಅಭಿಮಾನೋತ್ಸವವನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಅಭಿಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಇಂದು ಮಾತನಾಡಿದರು. ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಹೋರಾಟಕ್ಕೆ ಮತ್ತೊಂದು ಹೆಸರು ಎಂದು ಅವರು ವಿಶ್ಲೇಷಿಸಿದರು. ಪರಿಶ್ರಮ, ಛಲಕ್ಕೆ ಅವರು ಹೆಸರು ಪಡೆದವರು. ಬಡವರು, ಶೋಷಿತ- ಪೀಡಿತರು, ರೈತರ ಪರವಾಗಿ ಅವರ ಧ್ವನಿಯಾಗಿ 5 ದಶಕಗಳಿಂದ ನಿರಂತರವಾಗಿ ಕೆಲಸ ಮಾಡಿದ್ದಾರೆ ಎಂದು ನುಡಿದರು.
ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಹೆಚ್ಚು ಜನರನ್ನು ನಿರೀಕ್ಷಿಸಿರುವುದಾಗಿ ತಿಳಿಸಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ಮಾತನಾಡಿ, ಪಕ್ಷದ ಒಳಿತಿಗಾಗಿ ಈ ಕಾರ್ಯಕ್ರಮ ನಡೆಸಲು ಯಡಿಯೂರಪ್ಪ ಅವರು ಒಪ್ಪಿದ್ದಾರೆ ಎಂದು ವಿವರಿಸಿದರು. 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸಾಧನೆ ಮಾತನಾಡುವಂತೆ ಬದುಕಿದ್ದಾರೆ ಎಂದು ತಿಳಿಸಿದರು.
ಅಧಿಕಾರ ಬರುವುದಕ್ಕೆ ಮೊದಲು ನಾನು ಅಹಿಂದ ನಾಯಕ ಎಂದು ಹೇಳಿಕೊಂಡವರನ್ನು ನೋಡಿದ್ದೇವೆ. ಮಣ್ಣಿನ ಮಕ್ಕಳು, ಹಿಂದುಳಿದ ವರ್ಗದ ನಾಯಕ ಎಂದವರನ್ನು ನೋಡಿದ್ದೇವೆ. ಯಡಿಯೂರಪ್ಪ ಅವರು ಮಾತನಾಡುವುದೇ ಸಾಧನೆ ಆಗಬಾರದು; ಸಾಧನೆ ಮಾತನಾಡಬೇಕೆನ್ನುತ್ತಾರೆ. ಆ ರೀತಿಯಾಗಿ ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಕೆಲಸ ಮಾಡಿದ್ದಾರೆ ಎಂದರು.