ನವದೆಹಲಿ, ಆ.22(Daijiworld News/SS): 2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ 63 ನಿಯಮಗಳು ಸೆಪ್ಟೆಂಬರ್ 1ರಿಂದ ಜಾರಿಯಾಗಲಿದೆ. ವಾಹನ ಸವಾರರು ಸಂಚಾರ ನಿಯಮವನ್ನು ಪಾಲಿಸದಿದ್ದರೆ ಭಾರೀ ದಂಡ ಬೀಳಲಿದೆ.
ಹೊಸ ಕಾನೂನಿನ ಪ್ರಕಾರ, ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ, ಶಿಕ್ಷೆ ವಿಧಿಸಲು ಅವಕಾಶ ಇದೆ. ಇದರಲ್ಲಿ ಮುಖ್ಯವಾಗಿ ದಂಡದ ಜೊತೆಗೆ ಪರವಾನಗಿ, ನೋಂದಣಿ, ರಾಷ್ಟ್ರೀಯ ಸಾರಿಗೆ ನೀತಿಗೆ ಸಂಬಂಧಿಸಿದ ನಿಯಮಗಳು ಮಾತ್ರ ಇರುತ್ತದೆ. ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿತ ಕೇಸ್ಗಳಲ್ಲಿ ಮೃತರಾದವರಿಗೆ 5 ಲಕ್ಷ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಟ್ರಾಫಿಕ್ ಸಂಬಂಧಿತ ಅಪರಾಧಗಳಲ್ಲಿ ಹೆಚ್ಚಿನ ದಂಡ ಜೊತೆಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇದರ ಜೊತೆಗೆ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡಿದೆ.
ನೂತನ ಕಾಯ್ದೆ ಪ್ರಕಾರ, ಆ್ಯಂಬುಲೆನ್ಸ್ ನಂತಹ ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ 10,000 ರೂ. ದಂಡ ವಿಧಿಸಲು ಅವಕಾಶವಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ರೂ. 500, ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದರೆ ರೂ. 5,000, ವಿಮೆ ಇಲ್ಲದಿದ್ದರೆ ರೂ. 2,000, ವೇಗದ ಚಾಲನೆಗೆ ರೂ. 2,000, ಸೀಟ್ ಬೆಲ್ಟ್ ಇಲ್ಲದಿದ್ದರೆ ರೂ. 1,000, ಹೆಲ್ಮೆಟ್ ರಹಿತ ಚಾಲನೆಗೆ ರೂ. 1,000, ಮದ್ಯಸೇವಿಸಿ ಚಾಲನೆಗೆ ರೂ. 10,000, ದ್ವಿಚಕ್ರವಾಹನದಲ್ಲಿ ಓವರ್ಲೋಡಿಂಗ್ (ಇಬ್ಬರಗಿಂತ ಹೆಚ್ಚು ಮಂದಿ ಪ್ರಯಾಣಿಸಿದರೆ) ಮಾಡಿದರೆ ರೂ. 2,000 ಈ ರೀತಿಯಾಗಿ ದಂಡ ವಿಧಿಸಲಾಗುತ್ತದೆ.
ರಸ್ತೆ ಅಪಘಾತವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂಚಾರ ನಿಯಮ ಉಲ್ಲಂಘನೆಗಳಿಗೆ ಭಾರೀ ದಂಡ ವಿಧಿಸುವಂತಹ ಮೋಟಾರು ವಾಹನ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಸಮ್ಮತಿ ಸಿಕ್ಕಿತ್ತು. 2017ರಲ್ಲೇ ಪರಿಚಯವಾಗಿದ್ದ ಈ ಮಸೂದೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಮತ್ತೆ ಮಂಡಿಸಿದ್ದರು. ಈ ಮಸೂದೆ ಪರ 108 ಹಾಗೂ ವಿರುದ್ಧ 13 ಮತಗಳು ಬಂದಿತ್ತು. 2017ರಲ್ಲೇ ಪರಿಚಯಿಸಲಾಗಿದ್ದ ಈ ಮಸೂದೆ ಲೋಕಸಭೆಯಲ್ಲಿ ಜುಲೈ 23ರಂದೇ ಅಂಗೀಕಾರವಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಈ ಮಸೂದೆ ಮೂಲೆ ಸೇರಿತ್ತು.