ಬೆಂಗಳೂರು, ಆ.22(Daijiworld News/SS): ಬಿಜೆಪಿಯಿಂದ ಅಧಿಕಾರ ದುರುಪಯೋಗ ಆಗುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ.
ಮಾಜಿ ಕೇಂದ್ರ ಗೃಹ ಸಚಿವ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ರಾತ್ರಿ ಬಂಧಿಸಿತ್ತು. ಇದೀಗ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿರುವ ಕರ್ನಾಟಕ ಕಾಂಗ್ರೆಸ್, ಸಿಬಿಐ ಮತ್ತು ಇಡಿ ಬಿಜೆಪಿಯ ಮುಂಚೂಣಿಯ ಘಟಕಗಳಾಗಿ ಬದಲಾಗಿದ್ದು, ರಾಜಕೀಯವಾಗಿ ಮಣಿಸಲು ಕಾಂಗ್ರಸ್ ನ ಹಿರಿಯ ನಾಯಕ ಚಿದಂಬರಂ ಅವರನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಟ್ವೀಟ್ ಮಾಡಿದೆ.
ಬಿಜೆಪಿ ಸರಕಾರ ಅತಿರೇಕದಿಂದ ವರ್ತಿಸುತ್ತಿದ್ದು, ಅಧಿಕಾರದ ಸಂಪೂರ್ಣ ದುರುಪಯೋಗ ಮಾಡುಕೊಳ್ಳುತ್ತಿದೆ. ಇದು ಖಂಡನೀಯ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.