ಚೆನ್ನೈ, ಮೇ. 03 (DaijiworldNews/AA): ಫ್ಲೈಟ್ನಲ್ಲಿ 2 ಬಾರಿ ವಾಂತಿ ಮಾಡಿಕೊಂಡ ಪ್ರಯಾಣಿಕನೋರ್ವ ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿದ್ದ ವಿಮಾನದ ತುರ್ತು ನಿರ್ಗಮನ ದ್ವಾರದಿಂದ ಹೊರಗೆ ಹಾರಿರುವ ಘಟನೆ ನಡೆದಿದೆ.

ಇಂದು ಮುಂಜಾನೆ ಶಾರ್ಜಾ-ಚೆನ್ನೈ ಏರ್ ಅರೇಬಿಯಾ ವಿಮಾನವು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಮುಂದೆ ಚಲಿಸುತ್ತಿತ್ತು. ಈ ವೇಳೆ ವಿಮಾನದಲ್ಲಿದ್ದ ಪುರುಷ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ಬಾಗಿಲು ತೆರೆದು ಹೊರಗೆ ಹಾರಿದ್ದಾನೆ.
ವಿಮಾನವು ಮುಖ್ಯ ರನ್ವೇಯಿಂದ ಹೊರಬಂದು ಟ್ಯಾಕ್ಸಿವೇಯಲ್ಲಿ ನಿಧಾನವಾಗಿ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಪೈಲಟ್ ತಕ್ಷಣವೇ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ತಕ್ಷಣ ವ್ಯಕ್ತಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.