ಚಿತ್ರದುರ್ಗ, ಮೇ. 03 (DaijiworldNews/AK): ಕರ್ನಾಟಕದ ರಾಜಕಾರಣದ ದಿಕ್ಕನ್ನು ಬದಲಾವಣೆ ಮಾಡಿದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು. ಬಿಎಸ್ವೈ ಅವರು ರಾಜ್ಯದ ಮಾಸ್ ಲೀಡರ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಬಣ್ಣಿಸಿದರು.

ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು, ಮಾಸ್ ಲೀಡರ್ ಸಿದ್ದರಾಮಯ್ಯ ಅಲ್ಲ. ಅದು ಯಡಿಯೂರಪ್ಪ. ಸಿದ್ದರಾಮಯ್ಯ ಅವರು ಒಂದು ಪಕ್ಷದಲ್ಲಿದ್ದು ಮತ್ತೊಂದು ಪಕ್ಷ ಸೇರಿ ಅಲ್ಲಿ ಮುಖ್ಯಮಂತ್ರಿಯಾದವರು. ಆದರೆ, ಒಂದೇ ಪಕ್ಷದಲ್ಲಿದ್ದು, ಅದನ್ನು ತಳಹಂತದಿಂದ ವಿಧಾನಸಭೆವರೆಗೆ ತಂದು ನಾಯಕರಾದವರು, ಜನನಾಯಕರಾದವರು ಯಡಿಯೂರಪ್ಪನವರು ಎಂದರು.
ಚಿತ್ರದುರ್ಗದಲ್ಲಿ ನಡೆಯುವ ಅಭಿಮಾನೋತ್ಸವ ಹೊಸ ದಾಖಲೆ ನಿರ್ಮಿಸುವ ಕಾರ್ಯಕ್ರಮ ಆಗಲಿದೆ. ಹತ್ತು ಲಕ್ಷ ಜನಸೇರಲಿದ್ದಾರೆ. ಇದನ್ನು ನೋಡಲು ಎರಡು ಕಣ್ಣು ಸಾಲದು. ಇದು ಇಡೀ ಭಾರತಕ್ಕೆ ಹೊಸ ದಾಖಲೆಯಾಗಲಿದೆ ಎಂದು ಹೇಳಿದರು.
ಮೇ ಅಂತ್ಯದಲ್ಲಿ ಈ ಕಾರ್ಯಕ್ರಮ ಆಯೋಜಿಸುವ ತೀರ್ಮಾನ ಮಾಡಿದ್ದೇವು. ಗೃಹ ಸಚಿವ ಅಮಿತ್ ಶಾ ಅವರು ಮೇ 9 ರಂದು ಬರಲು ಒಪ್ಪಿಗೆ ನೀಡಿದ್ದರಿಂದ ಅಂದೇ ಆಯೋಜಿಸಿದೆವು. ಮೇ 9 ರಂದು ಕಾಂಗ್ರೆಸ್ನ ಸೂರ್ಯ ಅಸ್ತಂಗತವಾಗುವ ಸಮಯ. ಅಂದು ಬಿಜೆಪಿಯ ಕಮಲ ಅರಳುವ ಸಮಯ ಎಂದು ಮಾರ್ಮಿಕವಾಗಿ ನುಡಿದರು.
ಬದಲಾವಣೆ ಬೇಕಾದರೆ ಪ್ರಬಲವಾದ ಕಾರಣ ಬೇಕು. ಈಗ ಅಭಿಮಾನೋತ್ಸವವೇ ಕಾರಣವಾಗಿದೆ. ಇದನ್ನು ಆಯೋಜಿಸಲು ಎಲ್ಲರೂ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಎಂದರು.
ನಾವೆಲ್ಲ ಸಾರ್ವಜನಿಕ ಜೀವನದಲ್ಲಿ ಬಹಳ ಆದರ್ಶಗಳನ್ನು ಇಟ್ಟುಕೊಂಡು ಬಂದಿರುತ್ತೇವೆ. ಅಧಿಕಾರ ಸಿಕ್ಕಾಗ ಅಧಿಕಾರ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಕಾಂಪ್ರಮೈಸ್ ಮಾಡಿಕೊಳ್ಳುತ್ತೇವೆ. ಅಧಿಕಾರ ನಮಗೆ ಮಾಡಿಕೊಂಡಿರುವ ಮಡದಿಯಂತೆ. ಆದರ್ಶಗಳೇ ನಮಗೆ ಮುಖ್ಯ. ಅಧಿಕಾರ ಬಂದ ನಂತರ ಆದರ್ಶಗಳನ್ನು ಮರೆಯುತ್ತೇವೆ. ಆದರೆ ಕೆಲವೇ ಕೆಲವು ಜನ ಅಧಿಕಾರ ಬಂದಾಗಲೂ ಆದರ್ಶಗಳನ್ನು ಮರೆಯದೇ ಅಧಿಕಾರವನ್ನು ಆದರ್ಶ ಪರಿಪಾಲನೆಗೆ ಬಳಸಿಕೊಂಡವರು ಇದ್ದಾರೆ. ಅಂತಹ ವಿರಳ ನಾಯಕರಲ್ಲಿ ಬಿಎಸ್ವೈ ಒಬ್ಬರು ಎಂದರು.
ಬಿಎಸ್ವೈ ಅವರನ್ನು ನಾವು ರೈತ ನಾಯಕ, ಹೋರಾಟಗಾರ ಎನ್ನುತ್ತೇವೆ. ಆದರೆ ಅವರ ಇನ್ನೊಂದು ಮುಖ ಅತ್ಯಂತ ಮಾನವೀಯತೆ ಇರುವವರು. ಅಪರೂಪದ ಸೂಕ್ಷ್ಮಾತಿಸೂಕ್ಷ್ಮ ನಾಯಕ ಅವರು. ಹಿಡಿದ ಕೆಲಸ ಮಾಡೇ ತೀರುವ ಅಪರೂಪದ ನಾಯಕ. ಅವರ ಜೊತೆ ಕೆಲಸ ಮಾಡುವ ಸೌಭಾಗ್ಯ ನಮ್ಮದು. ಅವರು ಬಹಳ ಜನರ ಬದುಕಿಗೆ ದಾರಿ ಮಾಡಿದ್ದಾರೆ. ಬಹಳ ಜನರ ಬದುಕಿಗೆ ಬೆಳಕು ನೀಡಿದ್ದಾರೆ, ಸಹಾಯ ಮಾಡಿದವರು ಎಂದು ಹೇಳಿದರು.
ಕೃತಜ್ಞತೆ ಎಂಬುದು ಮನುಷ್ಯನಿಗೆ ಬೇಕಾದ ಅತ್ಯಂತ ದೊಡ್ಡ ಗುಣ. ಯಡಿಯೂರಪ್ಪ ಎಂಬ ಮಹಾನಾಯಕನಿಗೆ ಕೃತಜ್ಞತೆ ಹೇಳುವ ಕಾರ್ಯಕ್ರಮ ಇದಾಗಿದೆ. ಮುಂದಿನ ದಿನಗಳಲ್ಲಿ ಯಡಿಯರಪ್ಪ ಅವರು ಕಂಡ ಕನಸಿನ ಸಾಕಾರವನ್ನು ನಾವೆಲ್ಲ ಮಾಡೋಣ. ವಿಧಾನಸೌಧದಲ್ಲಿ ಕಮಲದ ಧ್ವಜ ಹಾರಿಸುವ ಸಂಕಲ್ಪ ಮಾಡೋಣ. ಇದಕ್ಕಾಗಿ ನಾವೆಲ್ಲ ಕೆಲಸ ಮಾಡೋಣ ಎಂದು ಹೇಳಿದರು.