ನವದೆಹಲಿ, ಮೇ. 03 (DaijiworldNews/AK): ನಾಳೆ (ಮೇ 4) 4 ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಚುನಾವಣೆ ನಡೆದ ಎಲ್ಲಾ ರಾಜ್ಯಗಳು ಭಾರತದ ರಾಜಕೀಯ ಭೂಪಟದಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿವೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ರಾಜ್ಯಗಳ ಚುನಾವಣಾ ಫಲಿತಾಂಶ, ದೇಶದ ರಾಜಕಾರಣದ ದಿಕ್ಸೂಚಿಯಾಗಬಲ್ಲವು. ಅದೇ ರೀತಿ ಪುದುಚೇರಿ ಕೇಂದ್ರಾಡಳಿತ ಪ್ರದೇಶ ಕೂಡ ನಾಳೆ ತನ್ನ ರಾಜಕೀಯ ಭವಿಷ್ಯ ನಿರ್ಧರಿಸಲಿದೆ.
ಸೋಮವಾರ ಮಹಾ ತೀರ್ಪು ಹೊರಬೀಳಲಿರುವ ಹಿನ್ನೆಲೆ ಆಯಾ ರಾಜ್ಯಗಳಲ್ಲಿ ಕೊನೇ ಕ್ಷಣದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮತ ಎಣಿಕೆಗಾಗಿ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಭದ್ರತೆಯನ್ನು ಕೈಗೊಂಡಿದೆ. ಮೊದಲು ಅಂಚೆ ಮತಪತ್ರಗಳನ್ನು ಎಣಿಸಲಾಗುತ್ತದೆ, ನಂತರ ಇವಿಎಂಮತಗಳ ಎಣಿಕೆ ನಡೆಯಲಿದೆ.
ಮರು ಮತದಾನದ ಕಾರಣದಿಂದಾಗಿ ಪಶ್ಚಿಮ ಬಂಗಾಳದ ಫಾಲ್ಟಾ ಕ್ಷೇತ್ರದ ಫಲಿತಾಂಶ ಮಾತ್ರ ಮೇ 24ಕ್ಕೆ ಪ್ರಕಟವಾಗಲಿದ್ದು, ಉಳಿದೆಲ್ಲಾ ಕ್ಷೇತ್ರಗಳ ಫಲಿತಾಂಶ ನಾಳೆ ಸಂಜೆಯೊಳಗೆ ಲಭ್ಯವಾಗಲಿದೆ.