ನವದೆಹಲಿ, ಆ 22 (Daijiworld News/MSP): ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖಾ ತಂಡದ ಮುಂದೆ ಇಂದ್ರಾಣಿ ಮುಖರ್ಜಿ ನೀಡಿದ್ದ ಹೇಳಿಕೆಯೇ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಬಂಧನಕ್ಕೆ ಪ್ರಮುಖ ಅಸ್ತ್ರವಾಯಿತು ಎನ್ನಲಾಗಿದೆ.
ಆದರೆ ಆರೋಪ ನಿರಾಕರಿಸುವ ಚಿದಂಬರಂ, ಐಎನ್ಎಕ್ಸ್ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಹೆಸರು ಚಾರ್ಜ್ ಶೀಟ್ ನಲ್ಲೂ ಇಲ್ಲ, ತನಿಖಾ ಸಂಸ್ಥೆ ನನ್ನ ವಿರುದ್ದ ತಂತ್ರಗಾರಿಕೆ ರೂಪಿಸಿದ್ದರೂ ನಾನು ಕಾನೂನನ್ನು ಗೌರವಿಸುತ್ತೇನೆ ಎಂದಿದ್ದರು.
ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಇಂದ್ರಾಣಿ ಮುಖರ್ಜಿ ಮತ್ತು ಅವರ ಪತಿ ಪೀಟರ್ ಮುಖರ್ಜಿ ಅವರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದ ಹೇಳಿಕೆಯಲ್ಲಿ ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರನ್ನು ತಮ್ಮ ಉತ್ತರ ಬ್ಲಾಕ್ ಕಚೇರಿಯಲ್ಲಿ ಭೇಟಿಯಾಗಿದ್ದಾಗಿಯೂ ಆ ಬಳಿಕ ಅವರ ಪುತ್ರ ಕಾರ್ತಿ ಅವರನ್ನು ಭೇಟಿಯಾಗಿ ವ್ಯವಹಾರದಲ್ಲಿ ಸಹಕರಿಸುವಂತೆ ಮನವಿ ಮಾಡಿದ್ದ ವಿಚಾರವನ್ನು ತನಿಖಾ ತಂಡಕ್ಕೆ ತಿಳಿಸಿದ್ದರು.
ಇಂದ್ರಾಣಿ ಮುಖರ್ಜಿ ಬೈಕುಲಾ ಜೈಲಿನಲ್ಲಿದ್ದು, ಕಳೆದ ವರ್ಷ ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಬಳಿಕ ಸಾಕ್ಷಿದಾರರಾಗಿದ್ದರು. ಇವರ ಹೇಳಿಕೆಯೇ ಚಿದಂಬರಂ ಬಂಧನಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿದಂಬರಂ ಪುತ್ರ ಕಾರ್ತಿಯವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ.
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಐಎನ್ಎಕ್ಸ್ ಮಾಧ್ಯಮ ಸಂಸ್ಥೆಗೆ ವಿದೇಶಿ ಹೂಡಿಕೆ ಪಡೆದುಕೊಳ್ಳಲು ಕಾನೂನುಬಾಹಿರವಾಗಿ ಅನುಮೋದನೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.