ಬೆಂಗಳೂರು ಆ 22 (Daijiworld News/MSP): ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಿಗೆ ಖಾತೆಗಳ ಹಂಚಿಕೆ ಮಾಡಬೇಕಾಗಿದ್ದು, ಈ ವಿಚಾರವಾಗಿ ಗುರುವಾರ ಸಂಜೆ ದೆಹಲಿಗೆ ತೆರಳಿ ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಬಗ್ಗೆ ಚರ್ಚೆ ನಡೆಸಿ ಬಳಿಕ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ತಿಳಿಸಿದ್ದಾರೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪ್ರವಾಹ ಪೀಡಿದ ಪ್ರದೇಶದ ಸಂತ್ರಸ್ತರಿಗೆ ತಕ್ಷಣ 10 ಸಾವಿರ ರೂ ಪರಿಹಾರ ವಿತರಣೆಯನ್ನು ಗುರುವಾರ ಸಂಜೆಯೊಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು. ಇದಲ್ಲದೆ ದೆಹಲಿಯಿಂದ ಹಿಂತಿರುಗಿದ ಬಳಿಕ ಎರಡು-ಮೂರು ದಿನದೊಳಗಾಗಿ ಮತ್ತೆ ವೈಮಾನಿಕ ಸಮಿಕ್ಷೆ ನಡೆಸಲಾಗುವುದು, ಜತೆಗೆ ಪರಿಹಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗುವುದು ಎಂದರು.
ನೂತನ ಸಚಿವರುಗಳಿಗೆ ಶೀಘ್ರದಲ್ಲಿಯೇ ಖಾತೆಗಳನ್ನು ಹಂಚಿಕೆ ಮಾಡಲಾಗುವುದು. ಖಾತೆ ಹಂಚಿಕೆಯ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಇದೇ ವಿಚಾರವಾಗಿ ಇಂದು ಸಂಜೆ ದೆಹಲಿಗೆ ಹೋಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಲಾಗುದು. ಆ. ೨೩ ರ ಶುಕ್ರವಾರ ದೆಹಲಿಯಿಂದ ವಾಪಾಸ್ ಆಗಲಿದ್ದು ಆ ಬಳಿಕ ಖಾತೆ ಹಂಚಿಕೆ ನಡೆಸಲಾಗುವುದು ಎಂದು ತಿಳಿಸಿದರು.