ಮಡಿಕೇರಿ, ಆ.22(Daijiworld News/SS): ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯನ್ನು ಸ್ವಾಗತಿಸಲು ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಮೈಸೂರು ದಸರಾ ಹಿನ್ನೆಲೆಯಲ್ಲಿ ಗಜಪಯಣದಲ್ಲಿ ಪಾಲ್ಗೊಳ್ಳಲು ಕುಶಾಲನಗರ ದುಬಾರೆ ಶಿಬಿರದ 3 ಆನೆಗಳನ್ನು ಹುಣಸೂರು ವೀರನಹೊಸಳ್ಳಿಗೆ ಶಿಬಿರಕ್ಕೆ ಈಗಾಗಲೇ ಕಳುಹಿಸಿಕೊಡಲಾಗಿದೆ.
ಕುಶಾಲನಗರ ದುಬಾರೆ ಶಿಬಿರದ ಧನಂಜಯ (47), ಈಶ್ವರ(51), ವಿಜಯ(56) ಹೆಸರಿನ ಆನೆಗಳಿಗೆ ಪೂಜೆ ಸಲ್ಲಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಳ್ಕೊಟ್ಟಿದ್ದಾರೆ.
ನಾಡಹಬ್ಬದಲ್ಲಿ ಭಾಗವಹಿಸಲಿರುವ 14 ಆನೆಗಳ ಪೈಕಿ ಆರು ಆನೆಗಳು ಮಾತ್ರ ಮೊದಲ ಹಂತದಲ್ಲಿ ಇಂದು ಮೈಸೂರಿಗೆ ಪಯಣ ಬೆಳೆಸಲಿವೆ. ಅವುಗಳಲ್ಲಿ ನಾಲ್ಕು ಗಂಡಾನೆ, ಎರಡು ಹೆಣ್ಣಾನೆಗಳು ಸೇರಿವೆ. ಅಂಬಾರಿ ಸಾರಥಿ ಅರ್ಜುನ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರ್ ಹಾಗೂ ವಿಜಯ ಆನೆಗಳು ಮೈಸೂರಿಗೆ ತೆರಳಲಿವೆ.
ನಾಡಹಬ್ಬದಲ್ಲಿ ನಾಗರಹೊಳೆ ಹುಲಿ ಯೋಜನೆ ವಿಭಾಗದ ಬಳ್ಳೆ ಆನೆ ಶಿಬಿರದ ಅರ್ಜುನ, ಮತ್ತಿಗೋಡು ಆನೆ ಶಿಬಿರದ ಬಲರಾಮ, ಅಭಿಮನ್ಯು, ವರಲಕ್ಷ್ಮಿ, ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ಕಾವೇರಿ, ವಿಜಯ, ವಿಕ್ರಮ, ಗೋಪಿ, ಧನಂಜಯ, ಈಶ್ವರ, ಬಿಆರ್ಟಿ ವಿಭಾಗದ ಕೆ.ಗುಡಿ ಆನೆ ಶಿಬಿರದ ದುರ್ಗಪರಮೇಶ್ವರಿ, ಬಂಡೀಪುರ ವಿಭಾಗದ ರಾಂಪುರ ಆನೆ ಶಿಬಿರದ ಜಯಪ್ರಕಾಶ್ ಭಾಗವಹಿಸಲಿವೆ. ಹೆಚ್ಚುವರಿಯಾಗಿ ರಾಂಪುರ ಆನೆ ಶಿಬಿರದ ಲಕ್ಷ್ಮಿ, ರೋಹಿತ್ ಬರಲಿವೆ. ಈಶ್ವರ ಕೂಡ ಹೊಸ ಆನೆಯಾಗಿ ಸೇರ್ಪಡೆಗೊಳ್ಳಲಿದೆ.
ಎರಡನೇ ತಂಡ ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರಿಗೆ ಮತ್ತೆ 3 ಆನೆಗಳನ್ನು ಕಳುಹಿಸಿಕೊಡಲಾಗುವುದು ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಸಿ.ಆರ್.ಅರುಣ್ ಮಾಹಿತಿ ನೀಡಿದ್ದಾರೆ.