ಶ್ರೀನಗರ, ಆ.23(Daijiworld News/SS): ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯಿಂದ ನಡೆದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ರಜೌರಿ ಜಿಲ್ಲೆಯ ನೌಶೆರಾ ವಲಯದ ಕಾಲ್ಸಿಯಾ ಗ್ರಾಮದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕಾರ್ಯಾಚರಣೆಯಲ್ಲಿ ನಿರತವಾಗಿದ್ದ ವೇಳೆ ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಭಾರತೀಯ ಯೋಧನಿಗೆ ತೀವ್ರ ಗಾಯವಾಗಿದೆ. ಯೋಧನನ್ನು ಕೂಡಲೇ ಮಿಲಿಟರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಪಾಕಿಸ್ತಾನ ಯೋಧರನ್ನು ಹತ್ತಿಕ್ಕಲು ಭಾರತೀಯ ಸೇನೆಯೂ ಪರಿಣಾಮಕಾರಿಯಾಗಿ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪ್ರತಿದಾಳಿ ನಡೆಸಿದೆ.