ಮೈಸೂರು, ಆ 24 (DaijiworldNews/SM): ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಅತೃಪ್ತ ಶಾಸಕರ ಪರ ರಾಜ್ಯ ಸರಕಾರ ನಿಂತಿದೆ. ಅತೃಪ್ತರನ್ನು ಅನರ್ಹ ಶಾಸಕರ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಬಂದ ತಕ್ಷಣ ಮಂತ್ರಿ ಸ್ಥಾನ ನೀಡಲಾಗುವುದೆಂದು ಸಿಎಂ ಬಿ.ಎಸ್. ಯಡಿಯೂರಪ್ಪನವರೇ ಭರವಸೆ ನೀಡಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಬಿಜೆಪಿ ಪಕ್ಷ ಹಾಗೂ ಪಕ್ಷದ ನಾಯಕರು ಆಪರೇಷನ್ ಕಮಲ ನಡೆಸಿಲ್ಲ. ಸ್ವಇಚ್ಛೆಯಿಂದಲೇ ಎಲ್ಲರೂ ಬಂದಿದ್ದಾರೆ. ಅವರನ್ನು ಸ್ವಿಕರ್ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇದು ಇತ್ಯರ್ಥವಾದ 10 ದಿನದಲ್ಲಿ ಸಚಿವ ಸ್ಥಾನ ಕೊಡುವುದಾಗಿ ಸಿಎಂ ಭರವಸೆ ನೀಡಿದ್ದರು. ಅವರೆಲ್ಲರೂ ಮಂತ್ರಿಗಳಾಗುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಸಚಿವ ಸಂಪುಟದಲ್ಲಿ 17 ಮಂದಿಗೆ ಸ್ಥಾನ ಸಿಕ್ಕಿದೆ. ಉಳಿದ ಸ್ಥಾನಗಳ ಭರ್ತಿಗೆ ಸಂಬಂಧಿಸಿದಂತೆ ಸಿಎಂ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಈಗ ಅನರ್ಹರೂ ದೆಹಲಿಯಲ್ಲಿದ್ದು, ಅಲ್ಲಿಯೇ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರವೇ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದರು.