ನವದೆಹಲಿ, ಆ.24(Daijiworld News/SS): ಆರ್ಥಿಕತೆಯನ್ನು ಸರಿದಾರಿಗೆ ತರಲು ಇಡೀ ದೇಶ ಒಂದಾಗಿ ನಿಲ್ಲಬೇಕಾಗಿರುವ ಸಮಯ ಇದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಾದ್ಯಂತ ಆತಂಕ ಮೂಡಿಸಿರುವ ಆರ್ಥಿಕ ಕುಸಿತದ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬ ಸಂಪೂರ್ಣ ನಂಬಿಕೆ ಇದೆ. ಆರ್ಥಿಕತೆಯನ್ನು ಸರಿದಾರಿಗೆ ತರಲು ಇಡೀ ದೇಶ ಒಂದಾಗಿ ನಿಲ್ಲಬೇಕಾಗಿರುವ ಸಮಯ ಇದು ಎಂದು ಹೇಳಿದರು.
ದೇಶದ ಆರ್ಥಿಕತೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿ ಅದಕ್ಕೆ ದೆಹಲಿ ಸರ್ಕಾರವು ಸಂಪೂರ್ಣ ಬೆಂಬಲ ನೀಡಲಿದೆ. ಉದ್ಯೋಗ ನಷ್ಟದ ಬಗ್ಗೆ ನಾನು ವೈಯಕ್ತಿಕವಾಗಿ ಆತಂಕಕ್ಕೆ ಒಳಗಾಗಿದ್ದೇನೆ ಎಂದು ಹೇಳಿದರು.
ಇದು ಅತ್ಯಂತ ಕಳವಳಕಾರಿ ಸಂಗತಿ. ಅದರಲ್ಲಿಯೂ ಮುಖ್ಯವಾಗಿ ಆಟೊಮೊಬೈಲ್ ಉದ್ಯಮ, ಜವಳಿ, ರಿಯಲ್ ಎಸ್ಟೇಟ್ ಮತ್ತು ಇತರೆ ವಲಯಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಈ ವಲಯಗಳಲ್ಲಿನ ಆರ್ಥಿಕ ಬಿಕ್ಕಟ್ಟು ತೀವ್ರವಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನನಗೆ ಸಂಪೂರ್ಣ ಭರವಸೆ ಇದೆ. ಆರ್ಥಿಕ ಕುಸಿತದ ಬಿಕ್ಕಟ್ಟನ್ನು ಸರಿಪಡಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಈಗ ಇಡೀ ದೇಶ ಒಗ್ಗಟ್ಟಾಗಿ ನಿಂತು ಆರ್ಥಿಕತೆಯನ್ನು ಸರಿಪಡಿಸುವ ಕಾಲ ಎಂದು ಅಭಿಪ್ರಾಯಪಟ್ಟರು.