ನವದೆಹಲಿ,ಆ 24 (Daijiworld News/RD) : ಕೇಂದ್ರದ ಮಾಜಿ ಹಣಕಾಸು ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ, ಅನಾರೋಗ್ಯದ ಹಿನ್ನೆಲೆಯಲ್ಲಿ , ತೀವ್ರ ನಿಗಾ ಘಟಕದಲ್ಲಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
66 ವರ್ಷದ ಅರುಣ್ ಜೇಟ್ಲಿ ಅವರು ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಗಸ್ಟ್ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನ 12.07ಕ್ಕೆ ಕೊನೆಯುಸಿರೆಳೆದಿದ್ದಾರೆ. ಜೇಟ್ಲಿ ಬಹಳ ವರ್ಷಗಳಿಂದ ಮಧುಮೇಹ ಪೀಡಿತರಾಗಿದ್ದು, ಅವರಿಗೆ ಕಿಡ್ನಿ ಕಸಿಯನ್ನು ಸಹ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅವರಿಗೆ ಸಾಫ್ಟ್ ಟಿಸ್ಯೂ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾಗಿತ್ತು. ಸ್ಥೂಲಕಾಯದಿಂದ ಮುಕ್ತಿ ಪಡೆಯಲು ಅವರು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೂ ಸಹ ಒಳಗಾಗಿದ್ದರು.
ಹಿರಿಯ ನಾಯಕರಾದ ಅರುಣ್ ಜೇಟ್ಲಿ ಮೋದಿ ಸರಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಈ ಬಾರಿ ಲೋಕಸಭಾ ಚುನಾವಣೆಯನ್ನೆದುರಿಸಿರಲಿಲ್ಲ.