ಮುಂಬೈ,ಆ 24 (Daijiworld News/RD): ರೈಲ್ವೆ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುವ ಮೂಲಕ ಪ್ರಯಾಣಿಕರಿಗೆ ಸಂಗೀತದ ಹಿತ ನೀಡಿದ ರಾನು ಮೊಂಡಲ್, ಈ ಹಾಡಿನ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅನೇಕರು ಹಾಡಿಗೆ ಫಿದಾ ಆಗಿದ್ದರು. ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಮಿಂಚಿದ ಆಕೆಗೆ ಬಾಲಿವುಡ್ ರಿಯಾಲಿಟಿ ಶೋಗೆ ಎಂಟ್ರಿಯಾಗುವ ಅವಕಾಶ ಸಿಕ್ಕಿದೆ.
ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಮಧುರವಾಗಿ ಹಾಡುತ್ತಿದ್ದ ರಾನು ಮೊಂಡಲ್, ಅವರ ಹಾಡಿಗೆ ಫಿದಾ ಆದ ಅಲ್ಲಿನ ಪ್ರಯಾಣಿಕರು ಮೊಂಡಲ್ ಅವರ ಈ ವಿಡಿಯೋವನ್ನು `ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಲೈಕ್ ಹಾಗೂ ಶೇರ್ ಮಾಡುವ ಮೂಲಕ ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಇದೀಗ ರಾನು ಮೊಂಡಲ್ ಅವರಿಗೆ ಮುಂಬೈನಲ್ಲಿ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ.
ರಾನು ಮೊಂಡಲ್ ಅವರ ಈ ಪ್ರತಿಭೆಯನ್ನು ಗಮನಿಸಿದ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ್ದಾರೆ. ಈ ಬಗ್ಗೆ ಸ್ವತಃ ಹಿಮೇಶ್ ರೇಶ್ಮಿಯಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದು, ಪ್ರತಿಭೆಗೆ ಉತ್ತಮ ವೇದಿಕೆ ಕಲ್ಪಸಿ ಕೊಟ್ಟಿದ್ದಾರೆ.
ಈ ವಿಡಿಯೋದಲ್ಲಿ ರಾನು ಮೊಂಡಲ್ ಅವರು ಹಾಡು ರೆಕಾರ್ಡ್ ಮಾಡುತ್ತಿದ್ದಾಗ ಹಿಮೇಶ್ ಪಕ್ಕದಲ್ಲಿ ನಿಂತು ಆಕೆಗೆ ಸಹಾಯ ಮಾಡಿದ್ದು, ಈ ವಿಡಿಯೋ ನೋಡಿ ಸಾಮಾಜಿಕ ಜಾಲಾತಾಣಿಗರು ಹಿಮೇಶ್ ಅವರ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಹಿಮೇಶ್ ಅವರ ಮುಂಬರುವ ‘ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದಲ್ಲೂ ಹಾಡು ಹಾಡಲು ಅವಕಾಶ ನೀಡಿದ್ದು, ಇದರಲ್ಲಿ ರಾನು ಮೊಂಡೆಲೋ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಲಿದ್ದಾರೆ.