ಹಾಸನ, ಆ.24(Daijiworld News/SS): ನಾನು ಚುನಾವಣೆಯಲ್ಲಿ ಸೋತಿದ್ದೇನೆ, ಸೋತು ಧೃತಿಗೆಟ್ಟಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಬಿಎಸ್ವೈ ಸರ್ಕಾರ 3 ವರ್ಷ 8 ತಿಂಗಳು ನಡೆಯಬಹುದು. ಈ ಬಗ್ಗೆ ನಮ್ಮದು ಯಾವುದೇ ತಕರಾರು ಇಲ್ಲ. ಒಳ್ಳೆ ಕೆಲಸ ಮಾಡಿದರೆ ಸಂತೋಷ ಪಡುತ್ತೇವೆ. ಜನರಿಗೆ ತೊಂದರೆ ಆದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಹಿಂದೆ ನಡೆದ ಚುನಾವಣೆಯಲ್ಲಿ ಸನ್ನಿವೇಶ ಬದಲಾಗಿ ಸೋಲು ಅನುಭವಿಸಬೇಕಾಯಿತು. ನಾನು ಚುನಾವಣೆಯಲ್ಲಿ ಸೋತಿದ್ದೇನೆ, ಸೋತು ಧೃತಿಗೆಟ್ಟಿಲ್ಲ. ಸೋಲಿನ ಹೊಣೆಯನ್ನು ಯಾರ ಮೇಲೂ ಹೊರಿಸಲ್ಲ. ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನಮ್ಮ ಜತೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಮಧ್ಯಂತರ ಚುನಾವಣೆ ನಡೆಯಬಹುದು, ನಡೆಯದೇ ಇರಬಹುದು. ಈ ಕಾರಣಕ್ಕೆ ನಾನು ಪ್ರತಿದಿನ ಪಕ್ಷ ಕಟ್ಟಲು ಓಡಾಡುತ್ತಿದ್ದೇನೆ ಎಂದು ಹೇಳಿದರು.
ಸೋನಿಯಾ ಗಾಂಧಿ ಜಾತ್ಯತೀತವಾಗಿ ಒಂದುಗೂಡಿಕೊಂಡು ಹೋಗಬೇಕು ಎಂದಿದ್ದರು. ತುಮಕೂರಲ್ಲಿ ಸೋತಿದ್ದಕ್ಕೂ ನಾನು ನಿಂದನೆ ಮಾಡಿಲ್ಲ. ನಾನು ಆ ಬಗ್ಗೆ ಮಾತನಾಡಿಲ್ಲ. ಬೀದಿಯಲ್ಲಿ ಅದನ್ನು ನಾನು ಮಾತನಾಡುವುದಿಲ್ಲ. ಮುಂದಿನ ಚುನಾವಣೆಗೆ ಸಕಲ ಸಿದ್ಧತೆ ಮಾಡುತ್ತೇನೆ. ಈ ಸಾರಿಯ ಚುನಾವಣೆಗೆ ಆರ್ಥಿಕ ಪೆಟ್ಟು ಬಿದ್ದಿದೆ. ನಮಗೂ ಹಲವು ಸಮಸ್ಯೆ ಇದೆ ಎಂದು ತಿಳಿಸಿದರು.
370 ಕಾಲಂ ರದ್ದು ಒಂದು ವಿವಾದಾತ್ಮಕ ಕೆಲಸ ಆಗಿದೆ. ಅನೇಕರನ್ನು ಬಂಧಿಸಿದ್ದಾರೆ. ಇಂದಿಗೂ ಜನಜೀವನ ಸುಗಮವಾಗಿಲ್ಲ. ಅಲ್ಲಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಮಾಡಬೇಕಿತ್ತು. ಆಗ ಸಮಸ್ಯೆಗಳು ಉದ್ಭವ ಆಗುತ್ತಿರಲಿಲ್ಲ .ಈ ವಿಚಾರವಾಗಿ ವಿಶ್ವದ ಹಲವು ನಾಯಕರು ಮೋದಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.