ಛತ್ತೀಸ್ಗಢ, ಆ.24(Daijiworld News/SS): ನಕ್ಸಲ್ ಪೀಡಿತ ಛತ್ತೀಸ್'ಗಢದಲ್ಲಿ ಮತ್ತೆ ಎನ್ ಕೌಂಟರ್ ನಡೆದಿದ್ದು, ಘಟನೆಯಲ್ಲಿ ಐವರು ಮಾವೋವಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ನಾರಾಯಣ ಪುರ ಜಿಲ್ಲೆಯ ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿರುವ ಕುರಿತು ಮಾಹಿತಿ ಪಡೆದ ಭದ್ರತಾ ಪಡೆಗಳು ಕೂಡಲೇ ಅಲ್ಲಿಗೆ ದೌಡಾಯಿಸಿದ್ದು, ಸೈನಿಕರ ಆಗಮನಗ ವಿಚಾರ ತಿಳಿಯುತ್ತಲೇ ಮಾವೋವಾದಿಗಳು ಗುಂಡಿನ ಸುರಿಮಳೆಗರೆದಿದ್ದಾರೆ.
ಈ ವೇಳೆ ಸೈನಿಕರೂ ಕೂಡ ಪ್ರತಿದಾಳಿ ನಡೆಸಿದ್ದು, ಸೈನಿಕರ ಗುಂಡೇಟಿಗೆ ಐವರು ಮಾವೋವಾದಿಗಳು ಹತರಾಗಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಸೈನಿಕರಿಗೂ ಕೂಡ ಗಾಯವಾಗಿದ್ದು, ಗಾಯಾಳು ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಪ್ರದೇಶದಲ್ಲಿ ಗುಂಡಿನ ಚಕಮಕಿ ಚಾಲ್ತಿಯಲ್ಲಿದ್ದು, ಹೆಚ್ಚುವರಿ ಸೈನಿಕರನ್ನು ರವಾನಿಸಲಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.