ಬೆಂಗಳೂರು, ಆ.24(Daijiworld News/SS): ಹೆತ್ತವರಿಂದ ಮಕ್ಕಳ ಸಮಾನ ಪೋಷಣೆಗಾಗಿ ಸೇವ್ ಚೈಲ್ಡ್ ಇಂಡಿಯಾ ಫೌಂಡೇಷನ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದೆ.
ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ಪೋಷಕರಿಗೆ ಸಮಾನ ಪಾಲನೆ, ಜಂಟಿ ಹೊಣೆಗಾರಿಕೆಯನ್ನು ಅನುಷ್ಠಾನಗೊಳಿಸಬೇಕೆಂದು ಹಾಗೂ ಪೋಷಕರ ವಿಚ್ಛೇದನ ಪ್ರಕರಣಗಳಲ್ಲಿ ಸಿಲುಕಿರುವ ಮಕ್ಕಳ ಬಗ್ಗೆ ನ್ಯಾಯಾಲಯಗಳು ತಮ್ಮ ದೃಷ್ಟಿಕೋನ ಬದಲಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ದೇಶದಲ್ಲಿ ಶೇ, 16 ವಿಚ್ಚೇದನ ಪ್ರಕರಣಗಳಿದ್ದು ಅದರಲ್ಲಿ ಸಿಲುಕಿರುವ ಮಕ್ಕಳ ಅಳಲು ಸಮಾಜ ಹಾಗೂ ನ್ಯಾಯಾಲಯಗಳ ಗಮನಕ್ಕೆ ಬಂದಿಲ್ಲ. ಕೌಟುಂಬಿಕ ವಿವಾದದಿಂದ ತಂದೆ ಇಲ್ಲದೆ ತಾಯಿಯ ಜತೆಗಷ್ಟೇ ಮಕ್ಕಳು ಬೆಳೆಯುವುದರಿಂದ ಮಕ್ಕಳ ಬಾಲ್ಯ, ವಾತ್ಸಲ್ಯ, ಪಾಲನೆ ಕಸಿದುಕೊಂಡಂತಾಗುತ್ತದೆ. ಅದಕ್ಕಾಗಿ ಮಕ್ಕಳ ಬೆಳವಣಿಗೆ, ಪೋಷಣೆಯಲ್ಲಿ ಪೋಷಕರು ಸಮಾನ ಪಾತ್ರವಹಿಸುವಂತೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪೌಂಡೇಷನ್ ಸದಸ್ಯ ಹಾಗೂ ನ್ಯಾಯವಾದಿ ಪ್ರದೀಪ್ಕುಮಾರ್ ಕೌಶಿಕ್ ಮಾತನಾಡಿ, ವಿವಾಹದ ವಿವಾದದಲ್ಲಿ ಮಗುವನ್ನು ಒಬ್ಬರಿಗೆ ಸೀಮಿತವಾಗಿಸಬಾರದು. ಇದಕ್ಕಾಗಿ ಪೋಷಕರ ನಡುವೆ ಪಾಲನೆ ಬಗೆಗೆ ಒಪ್ಪಂದವಾಗಬೇಕು. ಇದಕ್ಕೆ ಸುಪ್ರೀಂ ನಿಂದ ಸಕಾರಾತ್ಮಕ ಸ್ಪಂದನೆ ಇದೆ ಎಂದು ಹೇಳಿದ್ದಾರೆ.