ನವದೆಹಲಿ,ಆ 25 (Daijiworld News/RD): ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಶನಿವಾರ ವಿಧಿವಶರಾಗಿದ್ದು, ಇಂದು ಸಕಲ ಗೌರವದೊಂದಿಗೆ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ನಿಗಂಬೋಧ್ ಘಾಟ್ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಕೈಲಾಶ್ ಕಾಲೋನಿಯ ಅವರ ನಿವಾಸದಿಂದ ಬಿಜೆಪಿ ಪ್ರಧಾನ ಕಚೇರಿಗೆ ತೆಗೆದುಕೊಂಡು ಹೋಗಲಾಗುತ್ತಿದ್ದು, ಮಧ್ಯಾಹ್ನದವರೆಗೆ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ನಿಗಂಬೋಧ್ ಘಾಟ್ ಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್, ಯುಎಇ ಮತ್ತು ಬಹರೇನ್ ದೇಶಗಳ ಪ್ರವಾಸದಲ್ಲಿ ಇದ್ದು, ಫ್ರಾನ್ಸ್ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯನ್ನು ರದ್ದುಗೊಳಿಸಿ ಜೇಟ್ಲಿ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
66 ವರ್ಷದ ಅರುಣ್ ಜೇಟ್ಲಿ, ಕೇಂದ್ರದ ಮಾಜಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೇಟ್ಲಿ, ಆಗಸ್ಟ್ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು 15 ದಿನಗಳ ಕಾಲ ವೆಂಟಿಲೇಟರ್, ಐಸಿಯುನಲ್ಲಿಟ್ಟರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಮಕ್ಕಳನ್ನು ಜೇಟ್ಲಿ ಅಗಲಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಷಿ, ಒಡನಾಡಿಗಳಾಗಿದ್ದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು, ಕಾಂಗ್ರೆಸ್ನ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡೆಲ್ಲಿ ಸಿಎಂ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಕಂಬನಿ ಮಿಡಿದಿದ್ದಾರೆ. ಕ್ರಿಕೆಟಿಗರಾದ ಸೆಹ್ವಾಗ್, ಗಂಭೀರ್ ಸಂತಾಪ ಸೂಚಿಸಿದ್ದಾರೆ.