ನವದೆಹಲಿ, ಆ.26(Daijiworld News/SS): ದೇಶದ 100 ರೈಲು ನಿಲ್ದಾಣಗಳಲ್ಲಿ ಮಣ್ಣಿನ ಲೋಟಗಳಲ್ಲಿ ಚಹಾ ಮತ್ತು ಕಾಫಿ ಮಾರಾಟ ಮಾಡುವುದನ್ನು ಕಡ್ಡಾಯ ಮಾಡಬೇಕು ಕೇಂದ್ರ ಸಚಿವ ನಿತಿನ್ ಗಡ್ಕರಿ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ಕುಂಬಾರರಿಗೆ ನೆರವಾಗುವ ಉದ್ದೇಶದಿಂದ ರೈಲ್ವೆ ಸಚಿವ ಪಿಯೂಷ್ ಗೋಯಲ್ಗೆ ಪತ್ರ ಬರೆದು 100 ರೈಲು ನಿಲ್ದಾಣಗಳಲ್ಲಿ ಮಣ್ಣಿನ ಲೋಟದಲ್ಲಿ ಚಹಾ ನೀಡುವುದನ್ನು ಕಡ್ಡಾಯಗೊಳಿಸಬೇಕು ಅಂತಾ ಕೋರಿದ್ದೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಭವಿಷ್ಯದಲ್ಲಿ ವಿಮಾನ ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ರಾಜ್ಯ ಸರ್ಕಾರಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟೀ ಸ್ಟಾಲ್ಗಳಲ್ಲಿ ಮಣ್ಣಿನ ಲೋಟದ ಬಳಕೆಯನ್ನು ಕಡ್ಡಾಯಗೊಳಿಸಲು ನಾನು ಸಲಹೆ ನೀಡಿದ್ದೇನೆ. ಇನ್ನು ಮಾಲ್ಗಳಲ್ಲೂ ಟೀ ಸ್ಟಾಲ್ಗಳಲ್ಲಿ ಮಣ್ಣಿನ ಲೋಟದಲ್ಲಿ ಟೀ ವಿತರಿಸಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
ಮಣ್ಣಿನ ಲೋಟಗಳ ಬಳಕೆಯನ್ನು ಕಡ್ಡಾಯಗೊಳಿಸುವುದರಿಂದ ಸ್ಥಳೀಯ ಕುಂಬಾರರಿಗೆ ಉದ್ಯೋಗ ದೊರೆಯಲಿದೆ ಮತ್ತು ಪ್ಲಾಸ್ಟಿಕ್ ಕಪ್ಗಳಿಗೆ ಬದಲು ಪರಿಸರ ಸ್ನೇಹಿಯಾದ ಇವುಗಳನ್ನು ಬಳಕೆ ಮಾಡಬಹುದಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಾರಾಣಸಿ ಮತ್ತು ರಾಯ್ಬರೇಲಿ ರೈಲು ನಿಲ್ದಾಣಗಳಲ್ಲಿ ಟೆರ್ರಾಕೋಟದಿಂದ ಮಾಡಿದ ಕುಲ್ಹಾಡ್, ಲೋಟಗಳು ಮತ್ತು ತಟ್ಟೆಗಳನ್ನು ಬಳಕೆ ಮಾಡಲಾಗುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವಾಲಯ ಕುಂಬಾರಿಕೆಗೆ ಉತ್ತಜೇನ ನೀಡಲು ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದೆ. ಅದರ ಭಾಗವಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ವತಿಯಿಂದ ಕಳೆದ ವರ್ಷ 10 ಸಾವಿರ ವಿದ್ಯುತ್ ಚಕ್ರಗಳನ್ನು ಕುಂಬಾರರಿಗೆ ವಿತರಿಸಲಾಗಿತ್ತು. ಈ ವರ್ಷ 25 ಸಾವಿರ ವಿದ್ಯುತ್ ಚಕ್ರಗಳನ್ನು ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿದೆ.