ನವದೆಹಲಿ, ಆ.26(Daijiworld News/SS): ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಉನ್ನತ ವಿಶೇಷ ಭದ್ರತಾ ದಳ(ಎಸ್ಪಿಜಿ)ವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಮನಮೋಹನ್ ಸಿಂಗ್ ಅವರಿಗೆ ಅಗತ್ಯವಿರುವ ಭದ್ರತೆ ಪ್ರಮಾಣದ ಮೌಲ್ಯಮಾಪನವನ್ನು ತಜ್ಞರು ಮಾಡಿದ್ದು, ಅದರ ಅನ್ವಯ ಅವರ ಭದ್ರತೆಯನ್ನು ಎಸ್ಪಿಜಿಯಿಂದ Z+ಗೆ ಇಳಿಸಲು ನಿರ್ಧರಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದ್ದು ಎಸ್ಪಿಜಿ ಬದಲಿಗೆ Z+ ಸೆಕ್ಯುರಿಟಿ ನೀಡಲಾಗುವುದು ಎಂದು ಹೇಳಿದೆ. ಇನ್ಮುಂದೆ ಮನಮೋಹನ್ ಸಿಂಗ್ ರಕ್ಷಣೆಗೆ ಸಿಆರ್ಪಿಎಫ್ ಸಿಬ್ಬಂದಿ ನಿಯೋಜಿಸಲ್ಪಡುತ್ತಾರೆ.
ದೇಶದ ಪ್ರಮುಖ ಹುದ್ದೆಗಳಲ್ಲಿ ಇರುವ ಆಯ್ದ ಗಣ್ಯ ವ್ಯಕ್ತಿಗಳಿಗೆ ಎಸ್ಪಿಜಿ ಭದ್ರತೆ ಒದಗಿಸಲಾಗುತ್ತದೆ. ಈ ಭದ್ರತೆಯನ್ನು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗುತ್ತಿದೆ. ಪ್ರಮುಖ ವ್ಯಕ್ತಿಗಳಿಗೆ ನೀಡಿದ ಭದ್ರತೆಯನ್ನು ಅವರ ಸ್ಥಾನದ ಆಧಾರದ ಮೇಲೆ ಹಾಗೂ ಅವರಿಗೆ ಇರುವ ಬೆದರಿಕೆಯ ಪ್ರಮಾಣ ಆಧರಿಸಿ ನಿಯತಕಾಲಿಕವಾಗಿ ಬದಲಾವಣೆ ಮಾಡಲಾಗುತ್ತದೆ.
ಮನಮೋಹನ್ ಸಿಂಗ್ ಕೆಲ ದಿನಗಳ ಹಿಂದೆಯಷ್ಟೇ ರಾಜ್ಯಸಭಾ ಸದಸ್ಯರಾಗಿ ಆರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.